ರಾಜಕೀಯ

ಬಿಜೆಪಿಯ ಮತ್ತೊಂದು ದೊಡ್ಡ ವಿಕೆಟ್ ಪತನ: ಕೇಸರಿ ಪಕ್ಷಕ್ಕೆ ರಾಜೀನಾಮೆ ಘೋಷಿಸಿದ ಜಗದೀಶ್ ಶೆಟ್ಟರ್

Lingaraj Badiger

ಹುಬ್ಬಳ್ಳಿ: ಆಡಳಿತರೂಢ ಬಿಜೆಪಿಯ ಮತ್ತೊಂದು ದೊಡ್ಡ ವಿಕೆಟ್ ಪತನವಾಗಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕೇಸರಿ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಶನಿವಾರ ರಾತ್ರಿ ಘೋಷಿಸಿದ್ದಾರೆ.

ಇಂದು ರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಧರ್ಮೇಂದ್ರ ಪ್ರಧಾನ್ ಅವರು ಜಗದೀಶ್ ಶೆಟ್ಟರ್ ಅವರ ಮನೆಗೆ ಆಗಮಿಸಿ, ಶೆಟ್ಟರ್ ಮನವೊಲಿಕೆಗೆ ಯತ್ನಿಸಿದರು. ಆದರೆ ಬಿಜೆಪಿ ನಾಯಕರ ಸಂಧಾನ ಸಭೆ ವಿಫಲವಾಗಿದೆ.

ಸಂಧಾನ ಸಭೆ ಬಳಿಕ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು, ಪಕ್ಷ ನನಗೆ ಎಲ್ಲಾ ಸ್ಥಾನಮಾನ ನೀಡಿದೆ. ನನ್ನ ಮೂವತ್ತು ವರ್ಷ ರಾಜಕಾರಣದಲ್ಲಿ ಕಳೆದ ಮೂರು ತಿಂಗಳು ಮಾತ್ರ ಅತ್ಯಂತ ಕೆಟ್ಡ ದಿನ. ನಾನು ಮುಖ್ಯಮಂತ್ರಿಯಾಗಿ, ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಪಕ್ಷವನ್ನು ಕೆಳ ಮಟ್ಟದಿಂದ ಕಟ್ಟಿದ್ದೇನೆ. ಪಕ್ಷ ನನಗೆ ಎಲ್ಲ ಗೌರವ ಕೊಟ್ಟಿದೆ. ಹೀಗಾಗಿ ಹೃದಯಪೂರ್ವಕ ಧನ್ಯವಾದ ಹೇಳುತ್ತೇನೆ ಎಂದರು.

ರಾಜ್ಯದಲ್ಲಿ ಬಿಜೆಪಿ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ನನ್ನ ಮೇಲೆ ಯಾವುದೇ ಕಪ್ಪುಚುಕ್ಕೆ ಇಲ್ಲ. ನನ್ನ ವಿರುದ್ಧ ಯಾವುದೇ ಭ್ರಷ್ಟಾಚಾರ ಆರೋಪ ಇಲ್ಲ. ಸೆಕ್ಸ್‌ ಸಿಡಿಯೂ ಇಲ್ಲ. ಹೈಕಮಾಂಡ್ ಸರ್ವೆ ವರದಿಯೂ ಸಹ ನನ್ನ ಪರ ಬಂದಿದೆ. ಆದರೂ ನನಗೆ ಇನ್ನೂ ಟಿಕೆಟ್ ನೀಡದಿರುವುದು ಅಚ್ಚರಿ ತಂದಿದೆ. ನಾನು ಶಿಸ್ತಿನ ರಾಜಕಾರಣಿಯಾದರೂ ಟಿಕೆಟ್ ಘೋಷಿಸಿಲ್ಲ ಎಂದರು.

ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದು ನಿಶ್ಚಿತ. ನಾಳೆಯೇ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ರಾಜ್ಯದಲ್ಲಿ ಲಿಂಗಾಯತ ನಾಯಕರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.

SCROLL FOR NEXT