ರಾಜಕೀಯ

ಬಿಜೆಪಿಗೆ ಶಟರ್ ಎಳೆದ ಜಗದೀಶ್ ಶೆಟ್ಟರ್: ಶಾಸಕ ಸ್ಥಾನ ಸೇರಿದಂತೆ ಬಿಜೆಪಿ ಸದಸ್ಯ ಸ್ಥಾನಕ್ಕೂ ರಾಜೀನಾಮೆ

Sumana Upadhyaya

ಶಿರಸಿ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ತೀವ್ರ ನೊಂದಿದ್ದ ಮಾಜಿ ಮುಖ್ಯಮಂತ್ರಿ, ಹಿರಿಯ ನಾಯಕ ಜಗದೀಶ್ ಶೆಟ್ಟರ್ ಭಾನುವಾರ ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಜೊತೆಗೆ ಬಿಜೆಪಿಯ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಮೂಲಕ ತಮ್ಮ ಮೂರು ದಶಕಗಳ ಬಿಜೆಪಿಯೊಂದಿಗಿನ ಸಂಬಂಧಕ್ಕೆ ಜಗದೀಶ್ ಶೆಟ್ಟರ್ ವಿದಾಯ ಹಾಡಿದ್ದಾರೆ. ಇಂದು ಬೆಳಗ್ಗೆ ಹುಬ್ಬಳ್ಳಿಯಿಂದ ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಹೋಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. 

ಇಂದು ಅಪರಾಹ್ನ ಬೆಂಗಳೂರಿಗೆ?: ಬಿಜೆಪಿಗೆ ರಾಜೀನಾಮೆ ನೀಡಿದ ನಂತರ ಶೆಟ್ಟರ್ ಅವರ ಮುಂದಿನ ರಾಜಕೀಯ ನಡೆಯೇನು ಎಂಬುದು ಕುತೂಹಲವಾಗಿದೆ. ಸಹಜವಾಗಿ ಅವರನ್ನು ಕಾಂಗ್ರೆಸ್ ನಾಯಕರು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಬೆಂಗಳೂರಿಗೆ ಅವರನ್ನು ಕರೆತರಲು ಕಾಂಗ್ರೆಸ್ ನಿಂದ ಹುಬ್ಬಳ್ಳಿಯಲ್ಲಿ ಹೆಲಿಕಾಪ್ಟರ್ ಸಿದ್ದವಾಗಿ ಕಾಯುತ್ತಿದೆ ಎಂದು ಹೇಳಲಾಗುತ್ತಿದೆ.

ತಮ್ಮ 30 ವರ್ಷಗಳ ರಾಜಕೀಯ ಜೀವನದಲ್ಲಿ ಕಳೆದ ಮೂರು ತಿಂಗಳು ಅತ್ಯಂತ ಕೆಟ್ಟ ಸಮಯವಾಗಿತ್ತು. ಬಿಜೆಪಿ ವರಿಷ್ಠರು ಮತ್ತು ನಾಯಕರು ತಮ್ಮನ್ನು ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಇದರಿಂದ ಬೇಸತ್ತು ಹೋಗಿದ್ದೇನೆ. ಆದರೆ ಈ ಬಾರಿ ಚುನಾವಣೆಯಲ್ಲಿ ಸ್ಪ್ರಧಿಸುವುದು ಖಂಡಿತ ಎಂದು ಮಾಧ್ಯಮಗಳ ಮುಂದೆ ಜಗದೀಶ್ ಶೆಟ್ಟರ್ ಹೇಳಿಕೊಂಡಿದ್ದಾರೆ. 

ಇನ್ನು ರಾಜಕೀಯ ಪಕ್ಷಗಳಲ್ಲಿ ಚುನಾವಣೆ ಹೊತ್ತಿನಲ್ಲಿ ರಾಜೀನಾಮೆ ನೀಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಮತ್ತೊಬ್ಬ ಬಿಜೆಪಿ ನಾಯಕ ನೆಹರು ಓಲೇಕಾರ್, ಕಾಂಗ್ರೆಸ್ ನಿಂದ ಅಖಂಡ ಶ್ರೀನಿವಾಸ ಮೂರ್ತಿ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಕೇಳಿಬರುತ್ತಿದೆ.

SCROLL FOR NEXT