ರಾಜಕೀಯ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶೇ.50 ರಷ್ಟು ಮೀಸಲಾತಿ ಮಿತಿ ತೆಗೆದು ಹಾಕುತ್ತೇವೆ: ರಾಹುಲ್ ಗಾಂಧಿ

Lingaraj Badiger

ಉಡುಪಿ/ಮಂಗಳೂರು: 2024ರ ಲೋಕಸಭೆ ಚುನಾವಣೆಯ ನಂತರ ಕೇಂದ್ರದಲ್ಲಿ ಯುಪಿಎ ಅಧಿಕಾರಕ್ಕೆ ಬಂದರೆ ಮೀಸಲಾತಿ ಮೇಲಿನ ಶೇ.50 ಮಿತಿಯನ್ನು ತೆಗೆದುಹಾಕಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಹೇಳಿದ್ದಾರೆ. 

ಉಡುಪಿಯ ಉಚ್ಚಿಲದಲ್ಲಿ ಮೀನುಗಾರರೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ, ಮೀಸಲಾತಿ ಮೇಲಿನ ಶೇ. 50 ರಷ್ಟು ಮಿತಿ ಯಾವುದೇ ವೈಜ್ಞಾನಿಕ ಮಾಹಿತಿ ಆಧರಿಸಿ ಮಾಡಿಲ್ಲ. ಕೇಂದ್ರ ಸರ್ಕಾರ ಏನು ಮಾಡಬೇಕೆಂದು ನಿರ್ಧರಿಸುವ 70 ಅತ್ಯಂತ ಶಕ್ತಿಶಾಲಿ ಅಧಿಕಾರಿಗಳಲ್ಲಿ ಕೇವಲ ಶೇ. 7 ರಷ್ಟು ಮಾತ್ರ ಒಬಿಸಿ, ದಲಿತ, ಬುಡಕಟ್ಟು ಮತ್ತು ಅಲ್ಪಸಂಖ್ಯಾತ ಸಮುದಾಯದ ಅಧಿಕಾರಿಗಳಿದ್ದಾರೆ ಎಂದು ಹೇಳಿದರು.

ಪ್ರಧಾನಿ ಮೋದಿಯವರು ಜಾತಿ ಗಣತಿ ಡೇಟಾವನ್ನು ಸಾರ್ವಜನಿಕಗೊಳಿಸುತ್ತಿಲ್ಲ ಎಂದು ಟೀಕಿಸಿದ ಮಾಜಿ ಕಾಂಗ್ರೆಸ್ ಅಧ್ಯಕ್ಷ, ಯುಪಿಎ ಅಧಿಕಾರದಲ್ಲಿದ್ದಾಗ ಜಾತಿ ಗಣತಿ ನಡೆಸಿದ್ದೆವು ಮತ್ತು ಕೇಂದ್ರದ ಬಳಿ ಅದರ ಮಾಹಿತಿ ಇದೆ. ಆದರೆ ಅದನ್ನು ಬಿಡುಗಡೆ ಮಾಡುತ್ತಿಲ್ಲ. ಜನರ ಸಮಸ್ಯೆಗಳನ್ನು ಪರಿಹರಿಸಲು ಜಾತಿಯ ದತ್ತಾಂಶ ಅತ್ಯಗತ್ಯ. ಶೇ. 50 ರಷ್ಟು ಮೀಸಲಾತಿಯ ಮಿತಿಯನ್ನು ಯಾವುದೇ ವೈಜ್ಞಾನಿಕ ಅಧ್ಯಯನಗಳ ಆಧಾರದ ಮೇಲೆ ನಿಗದಿಪಡಿಸದ ಕಾರಣ ಅದನ್ನು ತೆಗೆದುಹಾಕಬೇಕಾಗಿದೆ. ಆದರೆ ಪ್ರಧಾನಿ ಮೋದಿ ಅದನ್ನು ತೆಗೆದು ಹಾಕಲು ಒಪ್ಪುತ್ತಿಲ್ಲ'' ಎಂದು ಆರೋಪಿಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀನುಗಾರರಿಗೆ 10 ಲಕ್ಷ ವಿಮೆ, ಮೀನುಗಾರ ಮಹಿಳೆಯರಿಗೆ 1 ಲಕ್ಷ ರೂಪಾಯಿ ಬಡ್ಡಿ ರಹಿತ ಸಾಲ ಮತ್ತು ದಿನಕ್ಕೆ 500 ಲೀಟರ್‌ ಡೀಸೆಲ್ ಗೆ 25 ರೂಪಾಯಿ ಸಬ್ಸಿಡಿ ನೀಡಲಾಗುವುದು ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು.

SCROLL FOR NEXT