ರಾಜಕೀಯ

ರಾಜ್ಯದಲ್ಲಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರ: ದಕ್ಷಿಣ ಕರ್ನಾಟಕದ 4 ಕಡೆ ಇಂದು ರೋಡ್ ಶೋ

Manjula VN

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಈ ನಡುವಲ್ಲೇ ಭರ್ಜರಿ ಪ್ರಚಾರ ಕೈಗೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಕೋಲಾರ, ಚನ್ನಪಟ್ಟಣ, ಬೇಲೂರುಗಳಲ್ಲಿ ಬೃಹತ್ ಸಮಾವೇಶ ನಡೆಸಿ, ಬಿಜೆಪಿ ಪರ ಮತಯಾಚನೆ ಮಾಡಲಿದ್ದಾರೆ. ಸಂಜೆ ಮೈಸೂರಿನಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ.

ಬೆಳಿಗ್ಗೆ ಕೋಲಾರಕ್ಕೆ ಆಗಮಿಸಿರುವ ಮೋದಿಯವರು, ಬಿಜೆಪಿ ಪರ ಮತಯಾಚನೆ ಮಾಡಲಿದ್ದಾರೆ. ಇದಕ್ಕಾಗಿ ಕೆಂದಟ್ಟಿ ಸಮೀಪ ಸುಮಾರು 150 ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದೆ. ಸಮವೇಶದಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಗಳಿವೆ,

ನಂತರ ಮಧ್ಯಾಹ್ನ 1.15ರ ವೇಳೆಗೆ ರಾಮನಗರ ಜಿಲ್ಲೆ ಚನ್ನಪಟ್ಟಣಕ್ಕೆ ತೆರಳಿ, ತಾಲೂಕಿನ ಮತ್ತೀಕೆರೆ-ಶೆಟ್ಟಿಹಳ್ಳಿಯಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿ ಅಭ್ಯರ್ಥಿ ಸಿಪಿ ಯೋಗೇಶ್ವರ್ ಅವರು ಮೋದಿಯವರಿಗೆ 5.30 ಕೆಜಿ ತೂಕದ ಪ್ರಸಿದ್ಧ ಅಂಬೆಗಾಲಿನ ಕೃಷ್ಣನ ಪಂಚಲೋಹದ ವಿಗ್ರಹವನ್ನು ಉಡುಗೊರೆಯಾಗಿ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಸಮಾವೇಶಕ್ಕಾಗಿ ಸುಮಾರು 40 ಎಕರೆ ಜಾಗದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, ಸುಮಾರು 1 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಗಳಿವೆ. ಮಧ್ಯಾಹ್ನ ಅಲ್ಲಿಯೇ ಭೋಜನ ಸ್ವೀಕರಿಸಿ ಬಳಿಕ ಹಾಸನ ಜಿಲ್ಲೆಯ ಬೇಲೂರಿಗೆ ತೆರಳಿ, ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಲ್ಲಿಂದ ಮೈಸೂರಿಗೆ ತೆರಳಲಿದ್ದಾರೆ. ನಗರದ ಹೃದಯ ಭಾಗದಲ್ಲಿರುವ ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯ ಪ್ರಮುಖ ರಸ್ತೆಯಲ್ಲಿ ತೆರೆದ ವಾಹನದ ಮೂಲಕ 4 ಕಿ.ಮೀ ರೋಡ್ ಶೋ ನಡೆಸಲಿದ್ದಾರೆ.

SCROLL FOR NEXT