ರಾಜಕೀಯ

ಈ ಜನ್ಮದಲ್ಲಂತೂ ನನಗೆ ಅಂತಹ ತಮ್ಮ ಬೇಡ, ಮುಂದಿನ ಜನ್ಮದಲ್ಲೂ ಬೇಡವೇ ಬೇಡ: ಡಿಕೆಶಿ 'ಅಣ್ಣ' ಹೇಳಿಕೆಗೆ ಎಚ್.ಡಿ.ಕೆ ಟಾಂಗ್

Shilpa D

ಬೆಂಗಳೂರು: ಈ ಜನ್ಮದಲ್ಲಂತೂ, ಅಂತಹ ತಮ್ಮ ನನಗೆ ಬೇಡ, ಮುಂದಿನ ಜನ್ಮದಲ್ಲೂ ಅವರು ನನಗೂ ತಮ್ಮ ಆಗೋದೂ ಬೇಡವೇ ಬೇಡ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಕಾರ್ಪೋರೇಷನ್ (ಬಿಬಿಎಂಪಿ) ಕಚೇರಿಯಲ್ಲಿ ಏನು ನಡೀತು? 710 ಕೋಟಿ ರೂ. ಬಿಡುಗಡೆ ಆಗಿರಬೇಕಲ್ಲ. ಅದಕ್ಕೆ ‌26 ಅಂಶಗಳ ಮೇಲೆ ತನಿಖೆ ಮಾಡ್ತಾರಂತೆ. ಅಣ್ಣ ಹೇಳ್ತಾರೆ, ತಮ್ಮ ಕೇಳ್ಬೇಕು ಅಂತಾ ಅದೇನೋ ಡಿಕೆ ಶಿವಕುಮಾರ್ ಹೇಳಿದ್ದಾರಲ್ಲ. ಈ ಜನ್ಮದಲ್ಲಂತೂ ಅಂತಹ ತಮ್ಮ ನನಗೆ ಬೇಡ. ಮುಂದಿನ ಜನ್ಮದಲ್ಲೂ ಅವರು ನನಗೂ ತಮ್ಮ ಆಗೋದೂ ಬೇಡ ಎಂದು ಕಾಂಗ್ರೆಸ್‌ ಸರ್ಕಾರಕ್ಕೆ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿರುದ್ಧ ತಿರುಗೇಟು ನೀಡಿದ್ದಾರೆ.

ಇದೇ ವೇಳೆ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ಹಿಟ್ ಅಂಡ್ ರನ್ ಮಾಡುವ ಜಾಯಮಾನದ ವ್ಯಕ್ತಿ ನಾನಲ್ಲ, ಅದು ಕಾಂಗ್ರೆಸ್ ಸಂಸ್ಕೃತಿ ಎಂದರು. 12 ದಿನಗಳ ಕಾಲ ಹೊರ ದೇಶಕ್ಕೆ ಕುಟುಂಬ ಸಮೇತವಾಗಿ ಹೋಗಿದ್ದೆ. ವಾಪಸ್ಸು ಬರುವಾಗ ಏರ್‌ಪೋರ್ಟ್‌ನಲ್ಲಿ ಕೆಲ ವಿಷಯಗಳ ಪ್ರಸ್ತಾಪ ಮಾಡಿದ್ದು, ಸಿಎಂ ಏನೋ ಹೇಳಿದ್ದಾರಲ್ಲ ಹಿಟ್ ಅಂಡ್ ರನ್ ಅಂತಾ. ಹಿಟ್ ಅಂಡ್ ರನ್ ಜಾಯಮಾನದ ವ್ಯಕ್ತಿ ನಾನಲ್ಲ ಎಂದರು.

ಚುನಾವಣೆ ಸಂದರ್ಭದಲ್ಲಿ ಕಮಿಷನ್ ಎಂದು ಜಾಹೀರಾತು ಕೊಟ್ರಲ್ಲ ಇವ್ರು. ಹಿಂದಿನ ಸರ್ಕಾರದ ಕಮಿಷನ್ ಬಗ್ಗೆ ಇವ್ರು ದಾಖಲೆ ಕೊಡೋಕೆ ಆಗಿಲ್ಲ ಇವರ ಕೈಯಲ್ಲಿ. ನಾನು ವಿದೇಶದಲ್ಲಿದ್ದಾಗ ಮಾಧ್ಯಮಗಳ ವರದಿ ಗಮನಿಸಿದ್ದೇನೆ. ಜಯಚಂದ್ರರವರಿಗೆ ಜೀವ ಬೆದರಿಕೆ ಹಾಕಿದ್ದು ಯಾರು? ಜಯಚಂದ್ರ ಅವರಿಗೆ ನಾನು ಮನವಿ ಮಾಡ್ತೀನಿ, ನಮಗೆ ಇಲ್ಲಿ ಪಕ್ಷ, ಸ್ಥಾನಮಾನ ಮುಖ್ಯವಲ್ಲ. ನಾಡಿನ ಜನರ ಹಿತರಕ್ಷಣೆಯ ಮುಖ್ಯ. ಕಾನೂನು ಬಾಹಿರ ಚಟುವಟಿಕೆಗಳ ಮೌನಕ್ಕೆ ಶರಣಾಗಬೇಡಿ ಎಂದರು.

ಕಾಂಗ್ರೆಸ್‌ನವರು ನುಡಿದಂತೆ ನಡೆದಿದ್ದೇವೆ ಎಂದು ಜಾಹಿರಾತು ಕೊಟ್ಟಿದ್ದಾರೆ. ನೀವು ಯಾವ ರೀತಿ ನುಡಿದಂತೆ ನಡೆದಿದ್ದೀರಿ? ಎಂದು ಪ್ರಶ್ನಿಸಿದ ಎಚ್‌ಡಿಕೆ, ನೀವು ಕರೆಂಟ್ ಕೊಟ್ಟ ನಂತರ ಪಾಪ ಅವ್ರು ಬೆಳಕು ಕಾಣ್ತಿದ್ದಾರೆ ಅಲ್ವಾ? 200 ಯೂನಿಟ್ ಉಚಿತ ಎಂದು ಗೈಡ್ ಲೈನ್ಸ್ ಹಾಕಿದ್ರಲ್ಲ ಅದಕ್ಕೆ ನನ್ನ ತಕರಾರು ಇಲ್ಲ. 230-240 ಯುನಿಟ್ ವಿದ್ಯುತ್ ಬಳಸಿದವರಿಗೂ ವಿದ್ಯುತ್ ಬಿಲ್ ಕಳುಹಿಸಿದ್ದಾರೆ. ಅಲ್ಲೆಲ್ಲೋ ಕಲ್ಬುರ್ಗಿಗೆ ಇವತ್ತು ಹೋಗಿದ್ದಾರೆ. ಇವತ್ತು ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಅಲ್ಲಿ ಏನೋ ಉಚಿತ ಬಿಲ್ ಕೊಡೋಕೆ ಹೋಗಿದ್ದಾರೆ. ಟೋಪಿ ಹಾಕೋಕೂ ಒಂದು ಇತಿ ಮಿತಿ ಇದೆ. ಬಿಜೆಪಿ ಸರ್ಕಾರ ಇದ್ದಾಗ ಚೆಂಡು ಹೂ ಮುಟ್ಕೊಂಡು ಹೋಗಿದ್ರಿ. ಇವಾಗ ರಾಜ್ಯದ ಜನರಿಗೆ ಫ್ಲವರ್ ಫಾಟ್ ಹಿಡ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಇನ್ನು ವರ್ಗಾವಣೆ ಬಗ್ಗೆ ಮಾತಾಡೋಕೆ ಅಸಹ್ಯ ಆಗುತ್ತದೆ ಎಂದ ಎಚ್‌ಡಿ ಕುಮಾರಸ್ವಾಮಿ, ಪರಮೇಶ್ವರ್ ನಾನು ಏನು ಸಲಹೆ ಕೊಟ್ಟಿದ್ದೀನಿ ಹೇಳಪ್ಪ ಜನರ ಮುಂದೆ, ಬಿಡಿಎ ಸಂಬಂಧಿಸಿದ ಗಲಾಟೆ ನನ್ನಿಂದ ಶುರುವಾಗಿತ್ತಾ? ಪೊಲೀಸರ ವರ್ಗಾವಣೆಯಲ್ಲಿ ನಾನು ಯಾವುದಕ್ಕೆ ಹಸ್ತಕ್ಷೇಪ ಮಾಡಿದ್ದೇನೆ? ಹಿಂದೆ ಸಿದ್ದರಾಮಯ್ಯರನ್ನು ಮಜಾವಾದಿ ಎಂದು ಸಾಮಾನ್ಯವಾಗಿ ಹೇಳಿದ್ದೆ. ಕೊನೆಗೆ ಅದು ಎಲ್ಲಿ ಹೋಯ್ತು? ಅವನು ಯಾವನೋ ದುಬೈನಿಂದ ಕರೆಸಿ ಏನೇನೋ ಮಾಡಿದ್ರಲ್ಲ, ಗೃಹ ಸಚಿವರಿಗೂ ನಿಮಗೂ ಘರ್ಷಣೆ ಆಗಿದೆಯಲ್ಲ? ಸಿಸಿಟಿವಿ ಇರಲಿಲ್ವಾ? ಎಂದು ಪ್ರಶ್ನಿಸಿದರು.

SCROLL FOR NEXT