ರಾಜಕೀಯ

ಹಣದ ಹಪಾಹಪಿ, ಧನಪಿಶಾಚಿ ರಕ್ಕಸತನಕ್ಕೆ ಅಂತ್ಯ ಯಾವಾಗ? ಸುಲಿಗೆ ಮನಸ್ಥಿತಿಗೂ ಸೂಕ್ತ ಚಿಕಿತ್ಸೆ ಬೇಡವೇ ಸಿದ್ದರಾಮಯ್ಯನವರೇ?

Shilpa D

ಬೆಂಗಳೂರು: ರಾಜ್ಯದಲ್ಲಿ ಆಗುತ್ತಿರುವ ಭ್ರಷ್ಟಾಚಾರ, ಅಕ್ರಮಗಳನ್ನು ಬದಿಗಿಟ್ಟು ತಮ್ಮ ಭಾಷೆಯ, ಮಾನಸಿಕ ಸ್ಥಿತಿಯ ಬಗ್ಗೆ ಟೀಕೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದ್ದಾರೆ.

ಗುತ್ತಿಗೆದಾರರಿಂದ ಕಾಂಗ್ರೆಸ್ ಟ್ಯಾಕ್ಸ್ ಹಾಗೂ ವೈಎಸ್ ಟಿ ಟ್ಯಾಕ್ಸ್ ಸಂಗ್ರಹ ಮಾಡಲಾಗುತ್ತಿದೆ ಎಂದು ಪುನರುಚ್ಚರಿಸಿರುವ ಅವರು, ವೈಎಸ್ ಟಿ ಟ್ಯಾಕ್ಸ್ ಜತೆಗೆ ಕಾಂಗ್ರೆಸ್ ಟ್ಯಾಕ್ಸ್ ಹೆಸರನ್ನು ಉಲ್ಲೇಖ ಮಾಡಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, 'ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ!' ಇದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರ ಹೊಸ ಹೇಳಿಕೆ. ಇದೇ ಕೆಂಪಣ್ಣನವರ 40% ಆರೋಪವನ್ನೇ ಅಸ್ತ್ರ ಮಾಡಿಕೊಂಡು, ಕೆಂಪಣ್ಣನವರ ಕೃಪಾಕಟಾಕ್ಷದಿಂದಲೇ ಅಧಿಕಾರಕ್ಕೆ ಬಂದಿದ್ದೀರಿ. ಈಗ ಅವರನ್ನೇ ಬೆಂಕಿಗೆ ಹಾಕಲು ಹೊರಟಿದ್ದೀರಿ. ಇದು ಎಂಥಾ ಮನಃಸ್ಥಿತಿ? ಇದಕ್ಕೆ ಚಿಕಿತ್ಸೆ ಬೇಡವೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಈಗ ವಿಷಯಾಂತರ ಮಾಡಿ, ಕುಮಾರಸ್ವಾಮಿಯ ಟೀಕೆ, ಭಾಷೆ, ಆರೋಪ ಇಟ್ಟುಕೊಂಡು ಅನುಕಂಪ ಗಿಟ್ಟಿಸಲು ಹೊರಟಿದ್ದೀರಿ! ಆದರೆ, ಅನುದಿನವೂ ವರ್ಗಾವಣೆ, ಕಮಿಷನ್ ದಂಧೆಯಲ್ಲಿ ಬೇಯುತ್ತಿರುವವರ ಕರುಣಾಜನಕ ಕಥೆಗಳಿಗೆ ಕೊನೆ ಎಂದು? ನಿಮ್ಮ ಹಣದ ಹಪಾಹಪಿ, ಧನಪಿಶಾಚಿ ರಕ್ಕಸತನಕ್ಕೆ ಅಂತ್ಯ ಯಾವಾಗ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಇಂಥ ಸುಲಿಗೆ ಮನಸ್ಥಿತಿಗೂ ಸೂಕ್ತ ಚಿಕಿತ್ಸೆ ಬೇಡವೇ ಸಿದ್ದರಾಮಯ್ಯನವರೇ? ಸರ್ಕಾರಿ ಉದ್ಯೋಗಿಗಳು, ಅವರ ಕುಟುಂಬದವರ ಕಣ್ಣೀರಿನ ಶಾಪ ನಿಮಗೆ ತಟ್ಟದಿರುವುದೇ? ಮಾನಸಿಕ ಸ್ಥಿಮಿತತೆ ಎಂದರೆ ಸರಕಾರಿ ಉದ್ಯೋಗಿಗಳನ್ನು ಕಾಸಿಗಾಗಿ ಎಡೆಬಿಡದೆ ಕಾಡುವುದೇ? ಅಥವಾ ಇದೇನಾ ಸಾಮಾಜಿಕ ನ್ಯಾಯ? ನುಡಿದಂತೆ ನಡೆಯುವುದು ಎಂದರೆ ಇದೇನಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭ್ರಷ್ಟಾಚಾರದ ಆರೋಪವನ್ನೇ ಅನುಕಂಪವನ್ನಾಗಿ ಪರಿವರ್ತಿಸಿಕೊಳ್ಳುವ 'ಸಿದ್ದಕಲೆ' ನನಗಂತೂ ಗೊತ್ತಿಲ್ಲ. ಒಂದೇ ಹುದ್ದೆಗೆ ಮುಖ್ಯಮಂತ್ರಿ ಕಚೇರಿಯ ಐದಾರು ಟಿಪ್ಪಣಿಗಳು 'ನಡೆದಂತೆ ಎಲ್ಲವನ್ನೂ ನುಡಿಯುತ್ತಿವೆ' ಹಾಗೂ ಆಯ್ದ ಕಿಸೆಗಳನ್ನು ಭರ್ತಿ ತುಂಬುತ್ತಿವೆ! ಎಂದು ಅವರು ಕಿಡಿಕಾರಿದ್ದಾರೆ.

ನಮ್ಮ ಸೋಲಿನ ಆಘಾತ ಇರಲಿ, ನಿಮ್ಮ ಶಾಸಕರ ವರಾತದ ಕಥೆ ಏನು? 136 ಸೀಟು ಎಂದು ಬೀಗುತ್ತಿದ್ದೀರಿ, ಹಣದುಬ್ಬರದಂತೆ 'ಅತಿ ಉಬ್ಬರ'ವೂ ದೇಶಕ್ಕೆ ಒಳ್ಳೆಯದಲ್ಲ. ಸಭ್ಯ ಭಾಷೆಯಲ್ಲೇ ತಮಗೆ ಹೇಳುತ್ತಿದ್ದೇನೆ. ಅರ್ಥವಾಗಿದೆ ಎಂದು ಭಾವಿಸುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

SCROLL FOR NEXT