ರಾಜಕೀಯ

ಅನಿವಾರ್ಯವಾಗಿ ಹೊಂದಿಕೊಂಡು ಹೋಗುತ್ತಿದ್ದೇನೆ; ನಾನು ಲೋಕಸಭೆಗೆ, ನನ್ನ ಮಗ ವಿಧಾನಸಭೆಗೆ ಎಂಬುದು ಸುಳ್ಳು: ಸೋಮಶೇಖರ್

Shilpa D

ಬೆಂಗಳೂರು: ಬಿಜೆಪಿಯಲ್ಲಿ ಅನಿವಾರ್ಯವಾಗಿ ಹೊಂದಿಕೊಂಡು ಹೋಗುತ್ತಿದ್ದೇನೆ, ಪಕ್ಷದಲ್ಲಿ ಮುಂದುವರಿಯಬೇಕೇ ಬೇಡವೇ ಎಂಬ ಬಗ್ಗೆ ಇನ್ನೂ ನಾಲ್ಕೈದು ದಿನಗಳಲ್ಲಿ ತೀರ್ಮಾನ ಮಾಡುತ್ತೇನೆ ಎಂದು  ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಮಂಗಳವಾರ ಮಾತನಾಡಿದ ಅವರು, ನಾನು ಬಿಜೆಪಿಯಲ್ಲೇ ಇದ್ದೇನೆ. ಅನಿವಾರ್ಯವಾಗಿ ಹೊಂದಿಕೊಂಡು ಹೋಗುತ್ತಿದ್ದೇನೆ. ಇಲ್ಲಿನ ಸಮಸ್ಯೆ ಕುರಿತು ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲೇ ಪಕ್ಷದ ನಾಯಕರ ಗಮನಕ್ಕೆ ತಂದಿದ್ದೆ. ಆದರೆ, ಏನೂ ಪ್ರಯೋಜನ ಆಗಲಿಲ್ಲ ಎಂದರು.

ಅನಿವಾರ್ಯವಾಗಿ ನಾನೇ ಕಾಂಗ್ರೆಸ್‌ ನಾಯಕರನ್ನು ಭೇಟಿ ಮಾಡಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನಕ್ಕೆ ಮನವಿ ಮಾಡಿದ್ದೆ. ಅವರು ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು.

ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಮಾಡಿದ ಬಳಿಕ ಬಿಜೆಪಿ ಮುಖಂಡರು ಏನೇನೋ ಹೇಳುತ್ತಿದ್ದಾರೆ. ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ, ನನ್ನ ಮಗನನ್ನು ವಿಧಾನಸಭಾ ಚುನಾವಣಾ ಕಣಕ್ಕಿಳಿಸುತ್ತೇನೆ ಎಂದು ಸುದ್ದಿ ಹಬ್ಬಿಸಿದ್ದಾರೆ ಎಂದರು.

ದೆಹಲಿಗೆ ಬರುವಂತೆ ಬಿಜೆಪಿ ವರಿಷ್ಠರಿಂದ ಕರೆ ಬಂದಿದೆ. ಅಲ್ಲಿಗೆ ಹೋಗಿ ವಸ್ತುಸ್ಥಿತಿ ಕುರಿತು ಮಾಹಿತಿ ನೀಡುತ್ತೇನೆ. ಯಶವಂತಪುರ ಕ್ಷೇತ್ರದಲ್ಲಿನ ಒಳ್ಳೆಯ ವಾತಾವರಣವನ್ನು ಕೆಡಿಸಿದ್ದಾರೆ. ಗೊಂದಲ ಸರಿಪಡಿಸಿದರೆ ಮಾತ್ರ ಬಿಜೆಪಿಯಲ್ಲಿ ಮುಂದುವರಿಯುತ್ತೇನೆಎಂದು ತಿಳಿಸಿದರು.

SCROLL FOR NEXT