ರಾಜಕೀಯ

ಪ್ರಧಾನಿ ಮೋದಿ ಬೆಂಗಳೂರಿಗೆ ಬಂದಿದ್ದು ವಿಜ್ಞಾನಿಗಳನ್ನು ಅಭಿನಂದಿಸುವುದಕ್ಕೆ ಹೊರತು ಪಕ್ಷದ ಸಭೆಗಲ್ಲ: ಬಿಜೆಪಿ ತಿರುಗೇಟು

Sumana Upadhyaya

ಬೆಂಗಳೂರು: ಚಂದ್ರಯಾನ-3 ಯಶಸ್ಸಿನ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಇಂದು ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಹೆಚ್ ಎಎಲ್ ವಿಮಾನ ನಿಲ್ದಾಣದಿಂದ ಇಸ್ರೋ ಕಚೇರಿಯಿರುವ ಪೀಣ್ಯದವರೆಗೂ ತೆರೆದ ಕಾರಿನಲ್ಲಿ ಸಾಗುವ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ಸೇರಿದ ಜನತೆಯತ್ತ ಕೈ ಬೀಸುತ್ತಾ ಸಾಗಿದರು. 

ಈ ವೇಳೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವರಾದ ಗೋಪಾಲಯ್ಯ, ಮುನಿರತ್ನ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಬಿಜೆಪಿ ನಾಯಕರು ಸಾಮಾನ್ಯರಂತೆ ಜನತೆಯ ಜೊತೆಗೆ ಬ್ಯಾರಿಕೇಡ್ ಹಿಂದೆ ನಿಂತು ಪ್ರಧಾನಿಯತ್ತ ಕೈಬೀಸುತ್ತಿದ್ದರು.

ಇದಕ್ಕೆ ಕಾಂಗ್ರೆಸ್, ಚುನಾವಣೆಯಲ್ಲಿ ಸೋತ ನಂತರ ರಾಜ್ಯ ಬಿಜೆಪಿ ನಾಯಕರನ್ನು ಹೈಕಮಾಂಡ್ ಹತ್ತಿರಕ್ಕೂಸೇರಿಸದೆ ಬೀದಿಪಾಲು ಮಾಡಿದ್ದಾರೆ ಎಂಬುದಕ್ಕೆ ಇಂದಿನ ಘಟನೆಯೇ ಸಾಕ್ಷಿ ಎಂದು ಫೋಟೋ, ವಿಡಿಯೊ ಹಾಕಿ ಟೀಕಿಸಿದೆ.

ಇದಕ್ಕೆ ತಿರುಗೇಟು ನೀಡಿರುವ ರಾಜ್ಯ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಬಂದಿದ್ದು ಚಂದ್ರಯಾನದ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುವುದಕ್ಕೇ ಹೊರತು ಪಕ್ಷದ ಸಭೆಗಲ್ಲ. ಆದಾಗ್ಯೂ ನಮ್ಮ ಪಕ್ಷದ ಪ್ರಮುಖರು ಜನಸಾಮಾನ್ಯರಂತೆ ನಿಂತು ಅವರ ಸಂತಸದಲ್ಲಿ ಪಾಲ್ಗೊಂಡು ಅವರೊಡನೆ ತಮ್ಮ ಅಭಿಮಾನ ಪ್ರದರ್ಶಿಸಿರುವುದರಲ್ಲಿ ಹುಳುಕು ಹುಡುಕಲೆತ್ನಿಸಿರುವ ನಿಮಗೆ ಕಾಮಾಲೆಯಂತೆ ಏನೋ ಕಾಯಿಲೆ ಇರಬಹುದು!

ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲಾ ಹಳದಿಯೇ ಎಂಬಂತೆ ಗಾಂಧಿ ಕುಟುಂಬದ ಜೀತಕ್ಕೆ ಬಿದ್ದವರಂತೆ ಸೇವೆ ಮಾಡುವ ಕಾಂಗ್ರೆಸ್ಸಿಗರಿಗೆ ಪ್ರಧಾನಮಂತ್ರಿಗಳ ಅಧಿಕೃತ ಸರಕಾರಿ ಭೇಟಿಗೂ, ಅನೌಪಚಾರಿಕ ಭೇಟಿಗೂ ವ್ಯತ್ಯಾಸ ತಿಳಿದಿಲ್ಲ ಎಂದು ಟ್ವೀಟ್ ಮೂಲಕ ತಿವಿದಿದೆ.

SCROLL FOR NEXT