ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ, ಕಾಂಗ್ರೆಸ್ ಮುಖಂಡ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಸರ್ಕಾರವು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಜಿಲ್ಲಾ ಸಮಿತಿ ಸದಸ್ಯ ಹಾಗೂ ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದಕ್ಕೆ ರಾಜ್ಯ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಬಿಜೆಪಿ, ‘ಸಿಎಂ ಸಿದ್ದರಾಮಯ್ಯ ಅವರಿಗೆ ಪುತ್ರ ವ್ಯಾಮೋಹ, ಧೃತರಾಷ್ಟ್ರನನ್ನೇ ಮೀರಿಸುವಂತಿದೆ ಎಂದು ಟೀಕಿಸಿದೆ.
ಸರ್ಕಾರದ ಆಡಳಿತದಲ್ಲಿ ಹಾಗೂ ವರ್ಗಾವಣೆ ದಂಧೆಯಲ್ಲಿ ಇನ್ನಿಲ್ಲದಂತೆ ಹಸ್ತಕ್ಷೇಪ ಮಾಡುವ ಆರೋಪ ಹೊತ್ತಿರುವ ಶ್ಯಾಡೋ ಸಿಎಂ ಯತೀಂದ್ರ ಅವರಿಗೆ ಈಗ ಸಾಂವಿಧಾನಿಕ ಹುದ್ದೆಯನ್ನು ದಯಪಾಲಿಸಲಾಗಿದೆ, ಅದು ಗುಟ್ಟಾಗಿ. ತಮ್ಮದು ಪಾರದರ್ಶಕ ಸರ್ಕಾರ ಎಂದು ಬೊಗಳೆ ಬಿಡುವ ಸಿದ್ದರಾಮಯ್ಯರವರು, ತಮ್ಮ ಪುತ್ರನಿಗೆ ನೀಡಿದ ಹುದ್ದೆಯ ನೇಮಕಾತಿ ಆದೇಶವನ್ನು ಇಷ್ಟು ದಿನ ಗುಟ್ಟಾಗಿರಿಸಿದ್ದರು ಎಂದು ವಾಗ್ದಾಳಿ ನಡೆಸಿದೆ.