ರಾಜಕೀಯ

ತೆಲಂಗಾಣ ಸಿಎಂ ಕೆಸಿಆರ್ ನಮ್ಮ ಅಭ್ಯರ್ಥಿಗಳನ್ನು ಸಂಪರ್ಕಿಸಿ ಪಕ್ಷಕ್ಕೆ ಆಹ್ವಾನಿಸಿದ್ದಾರೆ: ಡಿ ಕೆ ಶಿವಕುಮಾರ್

Sumana Upadhyaya

ಬೆಂಗಳೂರು: ತೆಲಂಗಾಣದಲ್ಲಿ ಸರ್ಕಾರ ರಚಿಸುವ ಪ್ರಯತ್ನದಲ್ಲಿ ತಮ್ಮ ಪಕ್ಷದ ಶಾಸಕರನ್ನು ಬಿಆರ್ ಎಸ್ ಮುಖ್ಯಸ್ಥ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಸಂಪರ್ಕಿಸಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಬೆಂಗಳೂರಿನಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬಿಆರ್ ಎಸ್ ಪಕ್ಷದವರು ನಮ್ಮ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ ಎಂಬುದು ನಮಗೆ ಗೊತ್ತಿದೆ. ಸ್ವತಃ ಸಿಎಂ ಅವರೇ ನಮ್ಮ ಅಭ್ಯರ್ಥಿಗಳನ್ನು ಸಂಪರ್ಕಿಸಿದ್ದಾರೆ ಎಂಬ ಮಾಹಿತಿ ನಮಗೆ ಸಿಕ್ಕಿದೆ ಎಂದು ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ತೆಲಂಗಾಣದಲ್ಲಿ ಕಾಂಗ್ರೆಸ್ ಸುಲಭವಾಗಿ ಸರಳ ಬಹುಮತ ಪಡೆಯುತ್ತದೆ ಎಂಬ ವಿಶ್ವಾಸ ನಮಗಿದೆ. ನನ್ನ ಪಕ್ಷದ ಕೆಲಸವೆಂದು ನಾನು ಅಲ್ಲಿಗೆ ಇಂದು ಹೋಗುತ್ತಿದ್ದೇನೆ. ತೆಲಂಗಾಣ ತಂಡದವರು ನಮ್ಮ ಕರ್ನಾಟಕ ಚುನಾವಣೆ ಸಮಯದಲ್ಲಿ ನಮ್ಮ ಜೊತೆಗಿದ್ದರು, ಹೀಗಾಗಿ ಪ್ರತ್ಯುಪಕಾರವಾಗಿ ನಾನು ಇಂದು ಅಲ್ಲಿಗೆ ಹೋಗುತ್ತಿದ್ದೇನೆ. ಫಲಿತಾಂಶ ನಂತರ ಏನಾಗುತ್ತದೆ ನೋಡೋಣ. ಅಲ್ಲಿ ಯಾವುದೇ ಬೆದರಿಕೆ ಇತ್ಯಾದಿ ಸಮಸ್ಯೆಗಳಿಲ್ಲ. ನಮಗೆ ವಿಶ್ವಾಸವಿದೆ. ನಮ್ಮ ಪಕ್ಷ ಸರಳ ಬಹುಮತ ಸಾಧಿಸಲಿದೆ ಎಂದರು.

ಇದಕ್ಕೂ ಮುನ್ನ ಇಂದು ಬೆಳಗ್ಗೆ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ತಮಗೆ ಬಿಆರ್ ಎಸ್ ನ ಹಲವು ನಾಯಕರು ಕರೆ ಮಾಡಿ ಕಾಂಗ್ರೆಸ್ ಸೇರಲು ಇಚ್ಛೆಯಿದೆ ಎಂದು ಹೇಳಿದ್ದರು ಎಂದರು.

ಕಳೆದ ಬಾರಿ ಬಿಆರ್ ಎಸ್ ನವರು ನಮ್ಮ 12 ಶಾಸಕರನ್ನು ಸೆಳೆದುಕೊಂಡಿದ್ದರು. ಆದರೆ ಈ ಬಾರಿ ಅವರ ಶಾಸಕರು ನಮ್ಮ ಪಕ್ಷಕ್ಕೆ ಬಾರದಂತೆ ತಡೆಯಲು ಪ್ರಯತ್ನಿಸುತ್ತಿದ್ದಾರೆ. ಬಿಆರ್ ಎಸ್ ನ ಹಲವು ನಾಯಕರು ಕಾಂಗ್ರೆಸ್ ಸೇರಲು ಇಚ್ಛಿಸಿದ್ದಾರೆ ಎಂದರು.

2018ರಲ್ಲಿ ಬಿಆರ್ ಎಸ್ (ಅಂದಿನ ತೆಲಂಗಾಣ ರಾಷ್ಟ್ರ ಸಮಿತಿ) 88 ಸ್ಥಾನಗಳನ್ನು ಗೆದ್ದುಕೊಂಡು ಶೇಕಡಾ 47.4ರಷ್ಟು ಮತ ಹಂಚಿಕೆಯನ್ನು ಗಳಿಸಿತ್ತು. ಕಾಂಗ್ರೆಸ್ 19 ಸ್ಥಾನಗಳನ್ನು ಗಳಿಸಿ ಎರಡನೇ ಸ್ಥಾನ ಗಳಿಸಿತ್ತು.

SCROLL FOR NEXT