ಧಾರವಾಡ: ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದವರು ಸ್ಪರ್ಧಿಸಲು ಮೂರು ಕ್ಷೇತ್ರಗಳ ಟಿಕೆಟ್ ನೀಡುವಂತೆ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದೇವೆಂದು ಸಚಿವ ಜಮೀರ್ ಅಹ್ಮದ್ ಖಾನ್ ಅವರು ಶುಕ್ರವಾರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಕೇಂದ್ರ ಸರ್ಕಾರದ ಬಗ್ಗೆ ಜನರು ಬದಲಾವಣೆ ಬಯಸಿದ್ದಾರೆ. ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಜನ ಬದಲಾವಣೆ ಬಯಸಿದ್ದಾರೆ. ಜನ ಈಗ ತೀರ್ಮಾನ ತೆಗೆದುಕೊಂಡು ಆಗಿದೆ. ರಾಜ್ಯದಲ್ಲಿ ಕನಿಷ್ಠ 25 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ಮೂರು ಕ್ಷೇತ್ರದಲ್ಲಿ ಮುಸ್ಲಿಂರಿಗೆ ಟಿಕೆಟ್ ಕೇಳಿದ್ದೇವೆ. ಬೆಂಗಳೂರು ಸೆಂಟ್ರಲ್, ಹಾವೇರಿ, ಬೀದರ್ ಕ್ಷೇತ್ರದ ಟಿಕೆಟ್ ಕೇಳಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಸಂಸತ್ ಭವನದ ಮೇಲೆ ಯುವಕರ ದಾಳಿ ಕುರಿತು ಮಾತನಾಡಿದ ಅವರು, ಸಂಸತ್ ಭವನದ ಮೇಲಿನ ದಾಳಿ ವಿಚಾರದಲ್ಲಿ ಕಾಂಗ್ರೆಸ್ ಕುತಂತ್ರವಿದೆ ಎಂಬ ಆರೋಪಗಳಿವೆ. ಇದರಲ್ಲಿ ಕಾಂಗ್ರೆಸ್ ಕುತಂತ್ರ ಹೇಗಿರುತ್ತೆ? ಅವರಿಗೆ ಪಾಸ್ ಕೊಟ್ಟವರು ಯಾರು? ಇದರಲ್ಲಿ ರಾಜಕೀಯ ಮಾತನಾಡಲು ನಾನು ಇಷ್ಟಪಡುವುದಿಲ್ಲ. ಇದರಲ್ಲಿ ಭದ್ರತಾ ವೈಫಲ್ಯವಾಗಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಮುಸ್ಲಿಂ ಸ್ಪೀಕರ್ ಹೇಳಿಕೆ ವಿವಾದ: ಪಟ್ಟು ಸಡಿಲಿಸದ ಬಿಜೆಪಿ; ಜಮೀರ್ ಅಹ್ಮದ್ ರಾಜಿನಾಮೆಗೆ ಆಗ್ರಹ, ಸಭಾತ್ಯಾಗ
ಆರೋಪಿಗಳು ಪ್ರೇಕ್ಷಕರ ಗ್ಯಾಲರಿ ಮೇಲಿಂದ ಜಂಪ್ ಹೊಡೆದಿದ್ದಾರೆ. ಹೀಗಾದರೆ ಅಲ್ಲಿ ಸೆಕ್ಯೂರಿಟಿ ವ್ಯವಸ್ಥೆ ಹೇಗಿದೆ? ಸಂಸತ್‌ನಲ್ಲಿ ಒಳಗೆ ಹೋಗಲು ಹತ್ತಾರು ಪ್ರಕ್ರಿಯೆಗಳಿವೆ. ಮಂತ್ರಿ, ಎಂಎಲ್‌ಗಳೂ ಸಂಸತ್‌ಗೆ ಹೋಗಲು ಅನೇಕ ಪ್ರಕ್ರಿಯೆಗಳಿವೆ. ಹಾಗಾದರೆ ಆ ಹುಡುಗ ಹೇಗೆ ಒಳ ಹೋದ?, ಸಿಎಂ ಕೂಡಾ ಪ್ರಧಾನಿಯನ್ನು ಭೇಟಿಯಾಗಬೇಕಾದರೂ ಅನೇಕ ಪ್ರಕ್ರಿಯೆಗಳಿವೆ. ನಾನು ಸಚಿವನಾಗಿ ನನಗಿನ್ನೂ ಲೋಕಸಭೆಗೆ ಹೋಗಲಾಗಿಲ್ಲ. ಹಾಗಾದರೆ ಆತ ಹೇಗೆ ಹೋದ ಎಂದು ಪ್ರಶ್ನಿಸಿದರು.
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರಸಾದ್ ಅಬ್ಬಯ್ಯ ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅವರ ಅಭಿಪ್ರಾಯ ಹೇಳಿರುವುದರಲ್ಲಿ ತಪ್ಪೇನಿದೆ. ಅಬ್ಬಯ್ಯ ಟಿಪ್ಪು ಸುಲ್ತಾನ್ ಮೇಲಿನ ಅಭಿಮಾನದಿಂದ ಹೇಳಿದ್ದಾರೆ ಎಂದರು.