ರಾಜಕೀಯ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ ಸರ್ಕಾರ ಏನನ್ನೂ ಸಾಧಿಸಿಲ್ಲ: ಪ್ರಿಯಾಂಕ್ ಖರ್ಗೆ

Manjula VN

ಕಲಬುರಗಿ: ಕರ್ನಾಟಕದಲ್ಲಿ, ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳೆದ ಮೂರು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಏನನ್ನೂ ಸಾಧಿಸಿಲ್ಲ ಎಂದು ಚಿತ್ತಾಪುರ ಶಾಸಕರೂ ಆದ ಕೆಪಿಸಿಸಿ ಸಂವಹನ ಮತ್ತು ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಅವರು ಶನಿವಾರ ಆರೋಪಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡಿದೆ ಎಂದು ಹೇಳುವುದಾದರೆ, ಆ ಸಾಧನೆಯನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ತೋರಿಸಲಿ ಎಂದು ಸವಾಲು ಹಾಕಿದರು.

ಬಿಜೆಪಿ ಸರ್ಕಾರ ಈ ಪ್ರದೇಶದಲ್ಲಿ ಅನುಷ್ಠಾನಗೊಳಿಸಲು ವಿಫಲವಾಗಿರುವ ಕಾಮಗಾರಿಗಳ ದೊಡ್ಡ ಪಟ್ಟಿಯನ್ನು ನೀಡಬಹುದು. ಕಲಬುರಗಿಯಲ್ಲಿ ರೈಲ್ವೇ ವಿಭಾಗಕ್ಕೆ ಮಂಜೂರಾತಿ ಹಾಗೂ ಜವಳಿ ಪಾರ್ಕ್‌ ಕಲ್ಪಿಸಲು ಏಕೆ ವಿಫಲವಾಗಿದೆ ಎಂಬುದಕ್ಕೆ ಸರಕಾರ ಉತ್ತರಿಸಲಿ. ಕೆಲವು ತಿಂಗಳುಗಳ ಹಿಂದೆ ಮಂಜೂರಾತಿ ಪಡೆಯುವ ನಿರೀಕ್ಷೆಯಿದ್ದ ಎನ್‌ಐಎಂಜೆಡ್ ಮತ್ತು ನಗರದಲ್ಲಿನ ಫ್ಲೈಓವರ್ ಯೋಜನೆಯ ಸ್ಥಿತಿಯ ಬಗ್ಗೆ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

‘ಮತ್ತೆ ಅಧಿಕಾರಕ್ಕೆ ಬರುವ ಕನಸನ್ನು ಬಿಜೆಪಿ ಕಾಣುತ್ತಿದೆ. ಪ್ರತಿ ಕೆಲಸಕ್ಕೂ ಶೇ.40 ಕಮಿಷನ್ ಕೇಳುವುದು, ಕೋಮು ಸೌಹಾರ್ದತೆ ಕದಡುವುದು, ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಹಲವಾರು ಪ್ರಮಾದ ಎಸಗಿರುವ ಬಿಜೆಪಿ ಪರವಾಗಿ ಜನರು ಹೇಗೆ ಮತ ಹಾಕುತ್ತಾರೆ?

ಬಿಜೆಪಿ ನಾಯಕರಿಗೆ ಸಾರ್ವಜನಿಕರ ಮುಂದೆ ಹೋಗಲು ಮುಖವಿಲ್ಲದ ಕಾರಣ, ಮತದಾರರ ಮೇಲೆ ಪ್ರಭಾವ ಬೀರಲು ಬಿಜೆಪಿ ಕೇಂದ್ರ ನಾಯಕರಿಗೆ ಪದೇ ಪದೇ ಕರ್ನಾಟಕಕ್ಕೆ ಭೇಟಿ ನೀಡುವಂತೆ ಒತ್ತಡ ಹೇರುತ್ತಿದ್ದಾರೆ, ಆದರೆ ಅದು ಕೆಲಸ ಮಾಡುವುದಿಲ್ಲ ಎಂದು ತಿಳಿಸಿದರು.

ಬಳಿಕ ಕಲಬುರಗಿಯಲ್ಲಿ ಫೆ.24-26ರವರೆಗೆ ಕಲ್ಯಾಣ ಕರ್ನಾಟಕ ಉತ್ಸವ ಆಯೋಜಿಸುವ ನಿರ್ಧಾರ ಕುರಿತ ಪ್ರಶ್ನೆಗೆ ಉತ್ತರಿಸಿದ, ಕಲ್ಯಾಣ ಕರ್ನಾಟಕ ಉತ್ಸವ ಆಯೋಜನೆಗೆ ನನ್ನ ವಿರೋಧವಿಲ್ಲ. ಆದರೆ, ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಗತ್ಯ ಅನುದಾನ ಪಡೆಯಬೇಕು. ಮೇಲಾಗಿ, ರಾಜ್ಯ ಸರಕಾರದಿಂದ ಪ್ರತ್ಯೇಕ ಅನುದಾನಕ್ಕೆ ಯತ್ನಿಸಬೇಕು. ಅದನ್ನು ಬಿಟ್ಟು ಕೆ.ಕೆ.ಆರ್.ಡಿ.ಬಿ ಅನುದಾನ ಬಳಸಿಕೊಳ್ಳುವುದು ತಪ್ಪು ಸಂದೇಶ ರವಾನಿಸುತ್ತದೆ. ಬರುವ ದಿನಗಳಲ್ಲಿ ಬೀದರ್ ಉತ್ಸವ, ವಿಶ್ವ ಖ್ಯಾತಿಯ ಹಂಪಿ ಉತ್ಸವಕ್ಕೂ ಹಣ ಕೊಡಿ ಎಂಬ ಬೇಡಿಕೆ ಬರುತ್ತದೆ. ಹೀಗಾದರೆ ಇಡೀ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳ ಪ್ರತ್ಯೇಕ ಉತ್ಸವಗಳಿಗೆ ಸುಮಾರು 100 ಕೋಟಿ ರೂ. ನೀಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡರೂ ಅಚ್ಚರಿಪಡಬೇಕಾಗಿಲ್ಲ ಎಂದರು.

ಈ ಪ್ರದೇಶದಲ್ಲಿ ಮೂಲಸೌಕರ್ಯ ಕಲ್ಪಿಸಲು ಕೆಕೆಆರ್‌ಡಿಬಿಯನ್ನು ಸ್ಥಾಪಿಸಲಾಗಿದೆ. ಸರಕಾರ ಕೆಕೆಆರ್‌ಡಿಬಿಗೆ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನ ನೀಡುತ್ತಿದೆ. ಕೆಕೆಆರ್‌ಡಿಬಿಯಿಂದ ಉತ್ಸವಕ್ಕೆ ಹಣ ನೀಡುವುದರಿಂದ ಭ್ರಷ್ಟಚಾರಕ್ಕೆ ಕಾರಣವಾಗಬಹುದು. ಕಲ್ಯಾಣ ಕರ್ನಾಟಕ ಉತ್ಸವವನ್ನು ಆಚರಿಸಲು ಸರ್ಕಾರವು ಪ್ರತ್ಯೇಕ ಅನುದಾನವನ್ನು ಬಿಡುಗಡೆ ಮಾಡಲಿ ಅಥವಾ ಪ್ರವಾಸೋದ್ಯಮ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕೆಕೆ ಉತ್ಸವವನ್ನು ಆಚರಿಸಲು ಹಣವನ್ನು ನೀಡಲಿ ಎಂದು ಹೇಳಿದರು.

SCROLL FOR NEXT