ರಾಜಕೀಯ

ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರಿಗೆ ಇಂದು ಅಮಿತ್ ಶಾ ಆಗಮನ: ಚುನಾವಣೆ ಗೆಲುವಿಗೆ ತಂತ್ರ

Sumana Upadhyaya

ಬಳ್ಳಾರಿ: ವಿಧಾನಸಭೆ ಚುನಾವಣೆಗೆ ದಿನ ಹತ್ತಿರವಾಗುತ್ತಿದ್ದಂತೆ ಕರ್ನಾಟಕಕ್ಕೆ ಬಿಜೆಪಿ ಕೇಂದ್ರ ನಾಯಕರ ಭೇಟಿ ಹೆಚ್ಚಾಗುತ್ತಿದೆ. ಬಿಜೆಪಿಯ ಚುನಾವಣಾ ಚಾಣಕ್ಯ ಎಂದೇ ಹೆಸರಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಇಂದು ಗಣಿನಾಡು ಬಳ್ಳಾರಿಗೆ ಆಗಮಿಸಲಿದ್ದಾರೆ. ಬಳ್ಳಾರಿ ಜಿಲ್ಲೆಯ ಸಂಡೂರಿನಎಸ್‌ಆರ್‌ಎಸ್‌ ಶಾಲಾ ಮೈದಾನದಲ್ಲಿ ಬಿಜೆಪಿಯ ಬೃಹತ್ ಸಾರ್ವಜನಿಕ ಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಇಂದು ಮಧ್ಯಾಹ್ನ ಅವರು ಸಂಡೂರಿಗೆ ಬಂದಿಳಿಯಲಿದ್ದಾರೆ. 

ಸಂಡೂರು ಏಕೆ, ಬಿಜೆಪಿಯ ತಂತ್ರವೇನು?: ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇತಿಹಾಸದಲ್ಲಿ ಈವರೆಗೆ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿಲ್ಲ. ಈ ಬಾರಿ ಶತಾಯಗತಾಯ ಗೆಲುವು ಸಾಧಿಸಬೇಕೆಂಬ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ.

ಬಳ್ಳಾರಿ ಜಿಲ್ಲೆಯಿಂದ ಸ್ಪರ್ಧೆ ಮಾಡುವ ಇಂಗಿತ ಹೊಂದಿರುವ ಶ್ರೀರಾಮುಲು ಅವರ ಹೆಸರನ್ನು ಅಮಿತ್ ಶಾ ಇಂದು ಘೋಷಣೆ ಮಾಡುವ ಸಾಧ್ಯತೆಯಿದೆ. ಈ ಕಾರ್ಯಕ್ರಮದಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯನ್ನು ಒಳಗೊಂಡಂತೆ ಕಲ್ಯಾಣ ಕರ್ನಾಟಕದ ಲಕ್ಷಾಂತರ ಜನ ಭಾಗವಹಿಸುವ ಸಾಧ್ಯತೆಯಿದೆ. ಇದಕ್ಕಾಗಿ ಎಸ್‍ಆರ್‍ಎಸ್ ಗ್ರೌಂಡ್‍ನಲ್ಲಿ ಬೃಹತ್ ವೇದಿಕೆ ಹಾಕಲಾಗಿದೆ.

ಸಂಜೆ ಅಮಿತ್ ಶಾ ಬೆಂಗಳೂರಿಗೆ: ಬಳ್ಳಾರಿ ಜಿಲ್ಲೆಯ ಕಾರ್ಯಕರ್ತರ ಸಭೆಯ ನಂತರ ಅಮಿತ್ ಶಾ ಸಂಜೆ 4 ಗಂಟೆಗೆ ಬೆಂಗಳೂರಿಗೆ ತೆರಳಲಿದ್ದು, ವಿಧಾನಸಭಾ ಚುನಾವಣೆಯ ಸಿದ್ಧತೆಯ ಬಗ್ಗೆ ರಾಜ್ಯದ ಬಿಜೆಪಿ ಮುಖಂಡರ ಜೊತೆ ಚರ್ಚೆ ನಡೆಸಲಿದ್ದಾರೆ. ಅಲ್ಲದೇ ಪಕ್ಷ ಸಂಘಟನೆ ಹಾಗೂ ಚುನಾವಣಾ ಗೆಲುವಿಗೆ ಬೇಕಾದ ತಂತ್ರಗಳ ಬಗ್ಗೆ ಬಿಜೆಪಿ ನಾಯಕರಿಗೆ ಸಲಹೆ ನೀಡಲಿದ್ದಾರೆ. ಗಣಿನಾಡು ಬಳ್ಳಾರಿ ಹಾಗೂ ನಾಲ್ಕು ಜಿಲ್ಲೆಯ ಬೆಜೆಪಿ ನಾಯಕರಿಗೆ ಕಲ್ಯಾಣ ಕರ್ಣಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು ಹೇಗೆ ಎಂಬ ಕುರಿತು ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಶಾ ತಂತ್ರದ ಪಾಠ ಮಾಡಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. 

SCROLL FOR NEXT