ರಾಜಕೀಯ

ರಾಜ್ಯ ವಿಧಾನಸಭಾ ಚುನಾವಣೆಗೆ ಸಿದ್ಧತೆ: ನಾಳೆ ಚಿತ್ರದುರ್ಗ, ದಾವಣಗೆರೆಗೆ ಜೆಪಿ ನಡ್ಡಾ ಭೇಟಿ

Manjula VN

ಚಿತ್ರದುರ್ಗ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿ ತನ್ನ ವರಿಷ್ಠರನ್ನು ರಾಜ್ಯ ಪ್ರವಾಸಕ್ಕೆ ಆಹ್ವಾನಿಸುತ್ತಿದೆ. ಗುರುವಾರ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು, ಚಿತ್ರದುರ್ಗ ಜಿಲ್ಲೆಯಲ್ಲಿ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಶುಕ್ರವಾರ, ಅವರು ದಾವಣಗೆರೆ ವಿಭಾಗದ (ದಾವಣಗೆರೆ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳು) ಕಾರ್ಯನಿರತ ವೃತ್ತಿಪರರೊಂದಿಗೆ ವಿಚಾರ ಮಂಥನ ನಡೆಸಲಿದ್ದಾರೆ. 8 ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕೇಂದ್ರ ನಾಯಕರ ಈ ಭೇಟಿ ಚಿತ್ರದುರ್ಗದ ಮೇಲೆ ಗಂಭೀರವಾಗಿ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದ್ದು, ಅಧಿಕಾರದ ಪರ ಅಲೆಯನ್ನು ಸೃಷ್ಟಿಸುವ ಬಿಜೆಪಿಯ ಯೋಜನೆಯ ಭಾಗ ಇದಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಎ ಮುರಳಿ ಅವರು ತಿಳಿಸಿದ್ದಾರೆ.

ದಾವಣಗೆರೆಗೆ ಭೇಟಿ ನೀಡುವುದಕ್ಕೂ ಮುನ್ನ ನಡ್ಡಾ ಅವರು ಮೊದಲು ಚಿತ್ರದುರ್ಗದಲ್ಲಿ ಮಾದಿಗರ ಮಾದಾರ ಚನ್ನಯ್ಯ ಮಠ ಮತ್ತು ಲಿಂಗಾಯತರ ಸಾದು ಉಪಪಂಗಡದ ಸಿರಿಗೆರೆ ಮಠಕ್ಕೆ ಭೇಟಿ ನೀಡಲಿದ್ದಾರೆ.

ದಾವಣಗೆರೆಯಲ್ಲಿ ನಡ್ಡಾ ಅವರು ವೃತ್ತಿಪರರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ 2023ರ ವಿಧಾನಸಭಾ ಚುನಾವಣೆ ಕುರಿತು ಚಿಂತನ ಮಂಥನ ನಡೆಸಲಿದ್ದಾರೆ ಎಂದು ದಾವಣಗೆರೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್ ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ಭಾನುವಾರ ನಡೆಯಲಿರುವ ಕಾಂಗ್ರೆಸ್ ಎಸ್ ಸಿ/ಎಸ್ ಟಿ ಸಮಾವೇಶದ ಹಿನ್ನೆಲೆಯಲ್ಲಿ ಬಿಜೆಪಿಯ ಸಭೆ ಮಹತ್ವ ಪಡೆದುಕೊಂಡಿದೆ.

SCROLL FOR NEXT