ರಾಜಕೀಯ

ಜ.16ರಿಂದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ: ವಿಧಾನಸಭಾ ಚುನಾವಣೆಗೆ ತಂತ್ರ ರೂಪಿಸಲು ರಾಜ್ಯ ಬಿಜೆಪಿ ಚಿಂತನೆ!

Manjula VN

ಬೆಂಗಳೂರು: ಈ ವರ್ಷದ ವಿಧಾನಸಭೆ ಚುನಾವಣೆಗೂ ಮುನ್ನ ಜನವರಿ 16 ರಂದು ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಸಭೆಯಲ್ಲಿ ರಾಜ್ಯ ಚುನಾವಣೆ ಕುರಿತು ಕಾರ್ಯತಂತ್ರ ಮತ್ತು ಪ್ರಣಾಳಿಕೆ ರೂಪಿಸಲು ರಾಜ್ಯ ಬಿಜೆಪಿ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ರಾಜ್ಯದ ಇತರರು, ರಾಷ್ಟ್ರೀಯ ನಾಯಕರು ಭಾಗವಹಿಸುತ್ತಿದ್ದು, ಈ ಸಂದರ್ಭದಲ್ಲಿ ಚುನಾವಣೆ ಕುರಿತು ಚರ್ಚೆ ನಡೆಸಿ, ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಪ್ರದೇಶ ಆಧಾರಿತ ತಂತ್ರಗಳನ್ನು ರೂಪಿಸುವ ನಿರೀಕ್ಷೆಗಳಿವೆ ಎನ್ನಲಾಗುತ್ತಿದೆ.

ದೆಹಲಿಯಲ್ಲಿ ನಡೆಯುವ ಈ ಸಭೆಯಲ್ಲಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಗೋವಿಂದ್ ಕಾರಜೋಳ ಕೂಡ ಭಾಗವಹಿಸಲಿದ್ದಾರೆ.

ಈಗಾಗಲೇ ಚುನಾವಣಾ ಚಟುವಟಿಕೆಗಳನ್ನು ಆರಂಭಿಸಿರುವ ಬಿಜೆಪಿ, ಈ ತಿಂಗಳು ರ್ಯಾಲಿಗಳು ಮತ್ತು ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಲು ಸಭೆ-ಸಮಾವೇಶಗಳನ್ನು ನಡೆಸುತ್ತಿದೆ. ಇದರ ಜೊತೆಗೆ ಜನವರಿ ಎರಡನೇ ವಾರದಲ್ಲಿ ಹುಬ್ಬಳ್ಳಿ ಮತ್ತು ಕಲಬುರ್ಗಿಗೆ ಪ್ರಧಾನಿ ಮೋದಿ ಅವರು ಭೇಟಿ ನೀಡುತ್ತಿದ್ದಾರೆ.

ಇದಷ್ಟೇ ಅಲ್ಲದೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ನಾಯಕರು ಈ ತಿಂಗಳು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ.

ಬಿಜೆಪಿಯ ಹಿರಿಯ ನಾಯಕರೊಬ್ಬರು ಮಾತನಾಡಿ, 2018ರ ಚುನಾವಣೆಯಲ್ಲಿ ಹಳೇ ಮೈಸೂರು, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಬೆಂಗಳೂರು ಮತ್ತು ಇತರ ಪ್ರದೇಶಗಳಲ್ಲಿ ಬಿಜೆಪಿ ಗೆದ್ದಿರುವ ಹಲವಾರು ಪ್ರದೇಶಗಳನ್ನು ಗುರುತಿಸಿದ್ದೇವೆ. ಗೆಲವು ಸಾಧಿಸಿರುವ ಪ್ರತಿಯೊಂದು ಪ್ರದೇಶದಲ್ಲಿ ಐದರಿಂದ ಏಳು ಸ್ಥಾನಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದೇವೆ. ಉದಾಹರಣೆಗೆ, ಹಳೆ ಮೈಸೂರಿನಲ್ಲಿ ಏಳು ಬಿಜೆಪಿ ಶಾಸಕರಿದ್ದು, ನಾವು 14 ಸ್ಥಾನಗಳನ್ನು ಗುರಿಯಾಗಿಸಿಕೊಂಡಿದ್ದೇವೆ. ಅದೇ ರೀತಿ, ಬೆಂಗಳೂರಿನಲ್ಲಿ 15 ಇದೆ, ಅದನ್ನು 20ಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದೇವೆ. ಆದರೆ, ಕರಾವಳಿ ಕರ್ನಾಟಕ, ಮಲೆನಾಡು ಅಥವಾ ಮಧ್ಯ ಕರ್ನಾಟಕ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ನಮ್ಮ ಸ್ಥಾನಗಳನ್ನು ಹೆಚ್ಚಳಗೊಳಿಸಿಕೊಳ್ಳುವ ಸಾಧ್ಯತೆಗಳು ಕಡಿಮೆಯಿದೆ ಎಂದು ಹೇಳಿದ್ದಾರೆ.

ಇದಲ್ಲದೇ ತಮ್ಮದೇ ರ್ಯಾಲಿಯಲ್ಲಿ ನಿರತರಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ತೆಕ್ಕೆಗೆ ಹಾಕಿಕೊಳ್ಳುವುದು ಸೇರಿದಂತೆ ಇತರೆ ರಾಜಕೀಯ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಗಳಿವೆ.

ಈ ಬಾರಿ 150 ಸೀಟುಗಳನ್ನು ಗೆಲ್ಲುತ್ತೇವೆ ಎಂದು ಪಕ್ಷದ ನಾಯಕರು ಹೇಳುತ್ತಿದ್ದರೂ ಆಂತರಿಕ ಕಚ್ಚಾಟದಂತಹ ಹಲವು ಸಮಸ್ಯೆಗಳಿದ್ದು, ಅವುಗಳನ್ನೂ ಬಗೆಹರಿಸಿಕೊಳ್ಳುವುದು ಮುಖ್ಯವಾಗಿದೆ.

ಸಚಿವ ಸಂಪುಟ ವಿಸ್ತರಣೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. "ಸಿಎಂ ಬೊಮ್ಮಾಯಿ ಅವರು ತಮ್ಮ ಸಂಪುಟ ವಿಸ್ತರಣೆಗೆ ಪಕ್ಷದ ಹೈಕಮಾಂಡ್‌ನಿಂದ ಅನುಮತಿ ಪಡೆಯುವ ನಿರೀಕ್ಷೆಯಿದೆ" ಎಂದು ಮೂಲಗಳು ತಿಳಿಸಿವೆ.

SCROLL FOR NEXT