ರಾಜಕೀಯ

ಬೆಂಗಳೂರಿನಲ್ಲಿಂದು 'ನಾ ನಾಯಕಿ' ಸಮಾವೇಶ: ರಾಜ್ಯ ಕಾಂಗ್ರೆಸ್​​ಗೆ ಪ್ರಿಯಾಂಕಾ ಕೊಡ್ತಾರಾ ಬೂಸ್ಟರ್ ಡೋಸ್!

Manjula VN

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಯಿಂದ ಅಧಿಕಾರವನ್ನು ಕಸಿದುಕೊಳ್ಳಲು ನಿರ್ಧರಿಸಿರುವ ರಾಜ್ಯ ಕಾಂಗ್ರೆಸ್ ಮತದಾರರನ್ನು ಅದರಲ್ಲೂ ಮುಖ್ಯವಾಗಿ ಮಹಿಳೆಯರನ್ನು ಸೆಳೆಯಲು ಮುಂದಾಗಿದೆ. ಇದರಂತೆ 2023ರ ವಿಧಾನಸಭಾ ಚುನಾವಣೆಗೆ ಪಕ್ಷ ಸಂಘಟನೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಬೂಸ್ಟರ್ ಡೋಸ್ ನೀಡಲು ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಎಐಸಿಸಿ ನಾಯಕಿ ಪ್ರಿಯಾಂಕಾ ಗಾಂಧಿ ಆಗಮಿಸುತ್ತಿದ್ದಾರೆ.

ಕಾಂಗ್ರೆಸ್‌ನ 'ನಾ ನಾಯಕಿ' ಸಮಾವೇಶ ಬೆಂಗಳೂರಿನಲ್ಲಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪಕ್ಷದ ಪ್ರಚಾರವನ್ನು ಪ್ರಾರಂಭಿಸಲಿದ್ದು, ರಾಜ್ಯ ಘಟಕವು 2.5 ಕೋಟಿ ಅಥವಾ ಒಟ್ಟು ಮತದಾರರಲ್ಲಿ ಶೇಕಡಾ 50 ರಷ್ಟಿರುವ ಮಹಿಳೆಯರನ್ನು ತನ್ನತ್ತ ಸೆಳೆಯಲು ಯತ್ನ ನಡೆಸುತ್ತಿದೆ.

ನಗರದ ಅರಮನೆ ಮೈದಾನದಲ್ಲಿ ಪ್ರಿಯಾಂಕಾ ಅವರು, 'ನಾ ನಾಯಕಿ' (ನಾನು ನಾಯಕ) ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಈ ವೇಳೆ ಮಹಿಳೆಯರಿಗಾಗಿ ನಿರ್ದಿಷ್ಟ ಯೋಜನೆಗಳನ್ನು ಘೋಷಣೆ ಮಾಡಲಿದ್ದಾರೆ.

ಫೆ.17 ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್ ನಲ್ಲಿ ಒಂದು ಕುಟುಂಬದ ಮಹಿಳೆ ಸ್ವತಂತ್ರವಾಗಿ ಮನೆ ನಿರ್ವಹಣೆ ನೋಡಿಕೊಳ್ಳಲು ಸಾಧ್ಯವಾಗುವಂತೆ ಒಂದು ಸಾವಿರ ರೂಪಾಯಿಗಳಿಂದ 2 ಸಾವಿರ ರೂಪಾಯಿಗಳವರೆಗೆ ವೆಚ್ಚ ಭರಿಸುವಂತಹ ಸ್ತ್ರೀ ಸಾಮರ್ಥ್ಯ ಯೋಜನೆ ಘೋಷಿಸುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿಯವರು ಹೇಳಿಕೆ ನೀಡಿದ್ದರು.

ರಾಜ್ಯ ಸರ್ಕಾರವು ಬಜೆಟ್ ನಲ್ಲಿ ಘೋಷಿಸುವ ಮೊದಲೇ ರಾಜ್ಯ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯ ಮುಖ್ಯ ಅಂಶವಾಗಿ ಸೋಮವಾರ ನಿರುದ್ಯೋಗಿ ಯುವತಿಯರಿಗೆ ಮಹತ್ವದ ಯೋಜನೆ ಘೋಷಿಸಲು ಸಿದ್ಧತೆ ನಡೆಸಿರುವುದಾಗಿ ತಿಳಿದುಬಂದಿದೆ.

ನಗರದ ಅರಮನೆ ಮೈದಾನದಲ್ಲಿ ನಡೆಯಲಿರುವ ಮಹಿಳಾ ಸಮಾವೇಶಕ್ಕೆ ಈಗಾಗಲೇ ಸರ್ವ ಸಿದ್ಧತೆಗಳು ನಡೆದಿದ್ದು, ಮಧ್ಯಾಹ್ನ 12:30ಕ್ಕೆ ಸಮಾವೇಶ ಆರಂಭವಾಗಲಿದೆ. ಸುಮಾರು ಒಂದು ಲಕ್ಷ ಮಹಿಳೆಯರು ಭಾಗಿಯಾಗುವ ನಿರೀಕ್ಷೆ ಇದ್ದು, ಉತ್ತರ‌ ಕರ್ನಾಟಕದ ಪ್ರತಿ ಬೂತ್ ನಿಂದ ತಲಾ ಇಬ್ಬರು, ದಕ್ಷಿಣ ಕರ್ನಾಟಕ ಭಾಗದ ಪ್ರತಿ ಬೂತ್ ನಿಂದ ತಲಾ ಮೂವರು ಮಹಿಳೆಯರು ಭಾಗಿಯಾಗಲಿದ್ದಾರೆ.

ಈ ನಡುವೆ ಚುನಾವಣೆಯಲ್ಲಿ ಹೆಚ್ಚಿನ ಮಹಿಳೆಯರಿಗೆ ಟಿಕೆಟ್ ಸಿಗುವಂತೆ ಮಾಡುವಂತೆ ಪ್ರಿಯಾಂಕಾ ಅವರಿಗೆ ಮನವಿ ಮಾಡುವುದಾಗಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಮಾಜಿ ಸಚಿವರಾದ ಉಮಾಶ್ರೀ ಮತ್ತು ರಾಣಿ ಸತೀಶ್ ಅವರು ಹೇಳಿದ್ದಾರೆ.

74 ಕ್ಷೇತ್ರಗಳಿಗೆ 109 ಮಹಿಳೆಯರು ಅರ್ಜಿ ಸಲ್ಲಿಸಿದ್ದು, ಕನಿಷ್ಠ ಮೂವತ್ತು ಕ್ಷೇತ್ರಗಳಿಗೆ ಟಿಕೆಟ್ ನೀಡಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಪುಷ್ಪಾ ತಿಳಿಸಿದ್ದಾರೆ.

SCROLL FOR NEXT