ರಾಜಕೀಯ

ಪಕ್ಷದ ನಿಷ್ಠಾವಂತರ ಕಡೆಗಣನೆ, ವಲಸಿಗರಿಗೆ ಮಣೆ: ಶಿವಲಿಂಗೇಗೌಡರಿಗೆ ವಿಧಾನಸಭೆ ಟಿಕೆಟ್ ನೀಡಲು ಅರಸೀಕೆರೆ ಕಾಂಗ್ರೆಸ್ ನಾಯಕರ ವಿರೋಧ

Shilpa D

ಹಾಸನ: ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿದೆ, ಆದರೆ ಶಿವಲಿಂಗೇಗೌಡ ಅವರಿಗೆ ಟಿಕೆಟ್ ಕೊಡುವುದಕ್ಕೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ವಿರೋಧಿಸಿದ್ದಾರೆ.

ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ಸಭೆ ನಡೆಸಿದ ‘ಕೈ’ ಮುಖಂಡರು. 25 ವರ್ಷದಿಂದ ಕಾಂಗ್ರೆಸ್ ಪಕ್ಷವನ್ನು ಉಳಿಸಿಕೊಂಡು ಬಂದಿದ್ದೇವೆ. ಕ್ಷೇತ್ರದಿಂದ ಇಬ್ಬರು ಅರ್ಜಿ ಹಾಕಿ ಪಕ್ಷದ ಗೌರವ ಎತ್ತಿ ಹಿಡಿದಿದ್ದಾರೆ. ಅರಸೀಕೆರೆ ಕ್ಷೇತ್ರದಲ್ಲಿ ಸೋಲುವುದು, ಗೆಲ್ಲುವುದು ಎರಡನೇ ಪ್ರಶ್ನೆ. ಪಕ್ಷದವರಿಗೆ ಟಿಕೆಟ್​​ ಕೊಡಬೇಕು, ಇದು ನಮ್ಮ ಮೊದಲ ಆದ್ಯತೆ. ಅರಸೀಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ನಿಷ್ಠಾವಂತ ಕಾರ್ಯಕರ್ತರ ಅಭಿಪ್ರಾಯವಾಗಿದೆ.

ಅರಸೀಕೆರೆ ಕ್ಷೇತ್ರದ ಟಿಕೆಟ್ ಕೋರಿ ಮೆಟ್ರೋ ಬಾಬು ಮತ್ತು ಜೆ.ಸಿ ಗೋವರ್ಧನ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿರುವ ಇಬ್ಬರಲ್ಲಿ ಒಬ್ಬರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿದರೆ ಕಾರ್ಯಕರ್ತರು ಅವರನ್ನು ಬೆಂಬಲಿಸುತ್ತಾರೆ, ಆದರೆ ಪ್ರಾಮಾಣಿಕ ಕಾರ್ಯಕರ್ತರ ಆಶಯಕ್ಕೆ ವಿರುದ್ಧವಾಗಿ ಹೈಕಮಾಂಡ್ ನಿರ್ಧಾರ ತೆಗೆದುಕೊಂಡರೇ ಕಾರ್ಯಕರ್ತರು ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಗೆಲ್ಲುವ ಉತ್ತಮ ಅವಕಾಶಗಳಿವೆ, ಹೈಕಮಾಂಡ್ ಈ ಅವಕಾಶವನ್ನು ಕಳೆದುಕೊಳ್ಳಬಾರದು, ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಬಾರದು ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮೆಟ್ರೋ ಬಾಬು ಹೇಳಿದ್ದಾರೆ.

ಜನವರಿ 21 ರಂದು ಹಾಸನದಲ್ಲಿ ನಡೆಯಲಿರುವ ಪ್ರಜಾಧ್ವನಿ ಸಮಾವೇಶದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ನಾಲ್ಕು ಬಾರಿ ಜೆಡಿಎಸ್ ನಿಂದ  ಶಾಸಕರಾಗಿ ಆಯ್ಕೆಯಾಗಿರುವ ಕೆಎಂ ಶಿವಲಿಂಗೇಗೌಡ ಕಾಂಗ್ರೆಸ್ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆ.ಎಂ.ಶಿವಲಿಂಗೇಗೌಡ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವುದಾಗಿ ಇನ್ನೂ ಹೇಳದ ಕಾರಣ ಯಾವುದೇ ನಿರ್ಧಾರ ಕೈಗೊಳ್ಳಲಾಗದೆ ಇಕ್ಕಟ್ಟಿಗೆ ಸಿಲುಕಿದ್ದಾರೆ.

SCROLL FOR NEXT