ರಾಜಕೀಯ

ಒಂದು ಕಡೆ ಪ್ರತಿಭಟನೆ ಮಾಡಿದ್ರೆ ಯಾರೂ ಬರಲ್ಲವೆಂದು ಕಾಂಗ್ರೆಸ್ ಮುನ್ನೂರು ಕಡೆ ಮಾಡುತ್ತಿದೆ: ಸಿಎಂ ಬೊಮ್ಮಾಯಿ ಟೀಕೆ

Manjula VN

ಬೆಳಗಾವಿ: ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದಲ್ಲಿ ಪಿಹೆಚ್‌ಡಿ ಪಡೆದಿದ್ದಾರೆ, ಕಾಂಗ್ರೆಸ್ ಪಕ್ಷವೇ ಭ್ರಷ್ಟಾಚಾರದ ಗಂಗೋತ್ರಿಯಾಗಿದ್ದು, ಕಾಂಗ್ರೆಸ್‍ನವರು ಭ್ರಷ್ಟಾಚಾರದ ಬಗ್ಗೆ ಮಾತನಾಡೋದೆ ಹಾಸ್ಯಾಸ್ಪದವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಟೀಕಿಸಿದ್ದಾರೆ.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಲ್ಲಿ ಒತ್ತುವರಿ ಆಗಿದ್ದು, ರಾಜಕಾಲುವೆ ಮುಚ್ಚಿಹೋಗಿದ್ದು, ರಾಜಕಾಲುವೆ ಹೆಸರಲ್ಲಿ ಭ್ರಷ್ಟಾಚಾರ ಮಾಡಿದ್ದು ಹೀಗೆ ಹತ್ತು ಹಲವು ಹಗರಣ ಅವರ ಕಾಲದಲ್ಲಿ ಆಗಿವೆ. ಲೋಕಾಯುಕ್ತ ಮುಚ್ಚಿ ಹಾಕಿ ಭ್ರಷ್ಟಾಚಾರಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. 69 ಪ್ರಕರಣ ಅವರ ಮೇಲಿತ್ತು. ಅದಕ್ಕಾಗಿ ಲೋಕಾಯುಕ್ತವನ್ನು ಮುಚ್ಚಿದರು ಎಂದು ಆರೋಪಿಸಿದರು.

ಭ್ರಷ್ಟಾಚಾರ ಕಾಂಗ್ರೆಸ್‌ನ ಅವಿಭಾಜ್ಯ ಅಂಗ. ಭ್ರಷ್ಟಾಚಾರ ಅಂದ್ರೆ ಕಾಂಗ್ರೆಸ್, ಕಾಂಗ್ರೆಸ್ ಅಂದ್ರೆ ಭ್ರಷ್ಟಾಚಾರವಾಗಿದೆ. ಅವರು ಮಾಡಿದ ಕರ್ಮಕಾಂಡ ಮುಚ್ಚಿ ಹಾಕಲು ಲೋಕಾಯುಕ್ತ ಮುಚ್ಚಿದರು. ಜನ ಇದನ್ನು ಒಪ್ಪಲ್ಲ. ಅವರ ಎಲೆಯಲ್ಲಿ ಕತ್ತೆ ಬಿದ್ದಿದೆ, ಅದನ್ನು ಮೊದಲು ನೋಡಿಕೊಳ್ಳಲಿ. ಅವರು ಒಂದು ಕಡೆ ಪ್ರತಿಭಟನೆ ಮಾಡಿದರೆ ಯಾರೂ ಬರಲ್ಲ. ಆದ್ದರಿಂದ ಮುನ್ನೂರು ಕಡೆ ಮಾಡುತ್ತಿದ್ದಾರೆಂದು ವ್ಯಂಗ್ಯವಾಡಿದ್ದಾರೆ.

ಯಾರ ಭ್ರಷ್ಟಾಚಾರ ಉಳಿಸಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಶೇ. 60 ಪ್ರೀಮಿಯಂ ಕೊಟ್ಟಿರುವ ಸರ್ಕಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಎಂದು ಆರೋಪಿಸಿದ ಅವರು, ತಾವು ಮಾಡಿರೋದನ್ನು ಮುಚ್ಚಿ ಹಾಕಲು ಕಾಂಗ್ರೆಸ್ ನವರು ಸೋಗಲಾಡಿತನ ತೋರುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದಾಖಲೆಗಳಿದ್ದರೆ ಲೋಕಾಯುಕ್ತಕ್ಕೆ ಕೊಡಲಿ. ಲೋಕಾಯುಕ್ತ ಸಂಸ್ಥೆ ತನಿಖೆ ಮಾಡಲಿದೆ.

ಲೋಕಾಯುಕ್ತ ಎಂಬ ಸ್ವತಂತ್ರ ಸಂಸ್ಥೆಯನ್ನು ಮುಚ್ಚಿ ಹಾಕಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಟ್ಟಿದ್ದರು. ಅವರೇ ಮಾಡಿದ ಸ್ವಂತ ಭ್ರಷ್ಟಾಚಾರ ಮುಚ್ಚಿ ಹಾಕಿದ್ದರು. ಅವರ ವಿರುದ್ಧ ಇದ್ದ ಎಲ್ಲ ಕಂಪ್ಲೆಂಟ್ ಎಸಿಬಿಗೆ ಕೊಟ್ಟು ಮುಚ್ಚಿ ಹಾಕಿದ್ದರು. ಈಗ ಯರ‍್ಯಾರು ದೂರು ಕೊಟ್ಟಿದ್ದಾರೋ ಅವೆಲ್ಲವೂ ಲೋಕಾಯುಕ್ತಕ್ಕೆ ವರ್ಗಾವಣೆಯಾಗಿ ಮತ್ತೆ ತನಿಖೆ ಆಗುತ್ತದೆ. ಅವರು ಅದರಲ್ಲಿ ಮೊದಲು ಸ್ವಚ್ಛವಾಗಿ ಬರಲಿ ಎಂದು ಸವಾಲು ಹಾಕಿದ್ದಾರೆ.

SCROLL FOR NEXT