ರಾಜಕೀಯ

ಕಾಂಗ್ರೆಸ್ ಸಿದ್ದಪಡಿಸಿದ ಆಹಾರವನ್ನು ಬಿಜೆಪಿ ಬಡಿಸುತ್ತಿದೆ: ವಿಪಕ್ಷ ನಾಯಕ ಸಿದ್ದರಾಮಯ್ಯ

Manjula VN

ಯಾದಗಿರಿ: ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸಿದ್ಧಪಡಿಸಿದ್ದ ಅಡುಗೆಯನ್ನು ಬಿಜೆಪಿ ಬಡಿಸುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶನಿವಾರ ಹೇಳಿದರು.

ಯಾದಗಿರಿಯಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ಮೊದಲ ಹಂತದ ಸಮಾರೋಪ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದರು. 2013ರಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನರಸಿಂಹಯ್ಯ ಸಮಿತಿ ವರದಿಯ ಶಿಫಾರಸ್ಸಿನ ಮೇರೆಗೆ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮೇಲ್ದರ್ಜೆಗೇರಿಸಲು ಎಲ್ಲ ಕ್ರಮಗಳನ್ನು ಕೈಗೊಂಡಿದ್ದೆವು. ಆಗ ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಾಗಿದ್ದಾಗ ಜಮೀನಿಗೆ ತಿದ್ದುಪಡಿ ತಂದಿದ್ದೆವು. ಹಿಂದಿನ ಕಾಂಗ್ರೆಸ್ ಸರ್ಕಾರ ತಯಾರಿಸಿದ ಅಡುಗೆಯನ್ನು ಪ್ರಧಾನಿ ಮೋದಿ ಬಡಿಸಿದ್ದಾರೆ ಎಂದು ಹೇಳಿದರು.

ಅದೇ ರೀತಿ ನಾರಾಯಣಪುರ ಸ್ಕಾಡಾ ಗೇಟ್ ಗಳನ್ನು ನಾವು ಪ್ರಾರಂಭಸಿದ್ದೆವು, 2014 ರಲ್ಲಿ ನಾವು ಈ ಯೋಜನೆಯನ್ನು ಜನರಿಗೆ ತಂದಿದ್ದೆವು. ಇದ್ದಕ್ಕಾಗಿ 3500 ಸಾವಿರ ಕೋಟಿ ಹಣವನ್ನು ನಾವು ಖರ್ಚು ಮಾಡಿದ್ದೆವು. ಆದರೆ, ಮೋದಿಯವರ ಕೈಯಿಂದ ಈ ಗೇಟ್ ಗಳನ್ನ ಉದ್ಘಾಟನೆ ಮಾಡಿಸಿದ್ದಾರೆ.

ಹಾಗಾಗಿ ಈ ಬಿಜೆಪಿಯವರ ಬಂಡವಾಳವೇ ಮೋದಿ ರಾಜ್ಯ ಬಿಜೆಪಿ ನಾಯಕರ‌ ಮುಖ ನೋಡಿ ಜನ ಓಟ್ ಹಾಕಲ್ಲ ಇವರ ಮುಖ ಅಳಸಿದೆ‌. ಹೀಗಾಗಿ ಮೋದಿ, ಶಾ‌ ಹಾಗೂ ನಡ್ಡಾಗೆ ಕರೆದುಕೊಂಡು ಬರುತ್ತಿದ್ದಾರೆ. ಈ ಬಿಜೆಪಿ ಸಿಎಂ ಹಾಗೂ ಸಚಿವರು ಅಲಿ ಬಾಬಾ ಚಾಲಿಸ್ ಚೋರ್ ಇದ್ದ ಹಾಗೆ ಎಂದು ವ್ಯಂಗ್ಯ ಮಾಡಿದರು.

‘ಪ್ರಜಾಧ್ವನಿ’ಯ ಮೊದಲ ಹಂತಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಕಿತ್ತೊಗೆದು ಕಾಂಗ್ರೆಸ್‌ನ್ನು ಆಯ್ಕೆ ಮಾಡಲು ಜನರು ಈಗಾಗಲೇ ನಿರ್ಧರಿಸಿದ್ದಾರೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಜನರಿಗೆ ಏನನ್ನೂ ಮಾಡಿಲ್ಲ ಎಂದು ಆರೋಪಿಸಿರುವ ಪ್ರಧಾನಿ ಮೋದಿಯವರ ಹೇಳಿಕೆಯನ್ನು ಟೀಕಿಸಿದರು.ಬಿಜೆಪಿ ಕಲ್ಯಾಣ ಕರ್ನಾಟಕಕ್ಕೆ ಏನು ಮಾಡಿದೆ‌ ಅಂತ‌‌ ಒಂದು ಸಾಕ್ಷಿ ತೋರಿಸಿ ಎಂದು ಪ್ರಶ್ನೆ ಮಾಡಿದರು.

ಮಲ್ಲಿಕಾರ್ಜುನ ಖರ್ಗೆ ಹಾಗೂ ದಿವಂಗತ ಧರಂಸಿಂಗ್ ರನ್ನ ನೆನೆದ ಡಿಕೆಶಿ, ಈ ಭಾಗಕ್ಕೆ ಇಬ್ಬರು ನಾಯಕರು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. 371 ಜೆ ತಿದ್ದುಪಡಿ ಮಾಡಿದ್ದೆ ಖರ್ಗೆ ಮಾತ್ತು ಧರಂಸಿಂಗ್. ಈ ಭಾಗಕ್ಕೆ ನಮ್ಮ ಸರ್ಕಾರ ಸಾಕಷ್ಟು ಕೊಡುಗೆ ಕೊಟ್ಟಿದೆ. ಆದರೆ, ಬಿಜೆಪಿ ಏನು ಮಾಡಿದೆ? ಯಾವುದೇ ಅಣೆಕಟ್ಟಯನ್ನ ಕಟ್ಟಿದ್ದಾರಾ ನೀರಾವರಿ ಮಾಡಿದ್ದಾರಾ‌, ಕುಡಿಯೋ ನೀರಿನ ವ್ಯವಸ್ಥೆ ಮಾಡಿದ್ದಾರಾ? ನಾವು ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳಿದರು.

ನಮ್ಮ ಸರ್ಕಾರ ಬಂದ ಮೇಲೆ 200 ಯೂನಿಟ್ ವಿದ್ಯುತ್ ಉಚಿತ 2 ಸಾವಿರ ರೂ. ಖಚಿತ ಎಂದು ಇದೇ ವೇಳೆ ಭರವಸೆ ನೀಡಿದರು.

SCROLL FOR NEXT