ರಾಜಕೀಯ

ವಿಪಕ್ಷ ನಾಯಕನ ಆಯ್ಕೆ ಕಸರತ್ತು: ಶಾಸಕರೊಂದಿಗೆ ಸಭೆ ನಡೆಸಲಿರುವ ಬಿಜೆಪಿ ವೀಕ್ಷಕರು; ಬೊಮ್ಮಾಯಿ-ಯತ್ನಾಳ್ ನಡುವೆ ಪೈಪೋಟಿ

Srinivas Rao BV

ಬೆಂಗಳೂರು: ರಾಜ್ಯದಲ್ಲಿ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, ವಿಪಕ್ಷ ನಾಯಕನ ಆಯ್ಕೆ ಬಿಜೆಪಿಗೆ ಕಗ್ಗಂಟಾಗಿದೆ. 

ವಿಪಕ್ಷ ನಾಯಕನ ಆಯ್ಕೆ ಸಂಬಂಧ ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಪಕ್ಷದ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದು, ರಾಜ್ಯದ ರಾಜಕೀಯ ಪರಿಸ್ಥಿತಿಗಳನ್ನು ವಿವರಿಸಿದ್ದಾರೆ.

ಹಿರಿಯ ಬಿಜೆಪಿ ನಾಯಕ ವಿನೋದ್ ತಾವ್ಡೆ, ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ ಅವರು ಬೆಂಗಳೂರಿನ ಬಿಜೆಪಿ ಕಚೇರಿಗೆ ಆಗಮಿಸಲಿದ್ದು, ಮಂಗಳವಾರ ಜೂ.04 ರಂದು ಪಕ್ಷದ 66 ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಸಿ ವಿಪಕ್ಷ ನಾಯಕನ ಆಯ್ಕೆ ಸಂಬಂಧ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಈ ಬಳಿಕ ವಿಪಕ್ಷ ನಾಯಕನ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಯಡಿಯೂರಪ್ಪ ಮಾಜಿ ಕೇಂದ್ರ ಸಚಿವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಣೆ ಅನಿವಾರ್ಯವಾಗಿದೆ. 

ಯಡಿಯೂರಪ್ಪ ಅವರ ಸಲಹೆಗಳನ್ನು ಪರಿಗಣಿಸಿರುವ ಬಿಜೆಪಿ ವರಿಷ್ಠರು ಸಮತೋಲನದ ನಿರ್ಧಾರ ಕೈಗೊಳ್ಳಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ವಿಪಕ್ಷ ನಾಯಕನ ಹುದ್ದೆ ರೇಸ್ ನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಯತ್ನಾಳ್ ನಡುವೆ ಪೈಪೋಟಿ ತೀವ್ರವಾಗಿದೆ.

SCROLL FOR NEXT