ರಾಜಕೀಯ

ವಿರೋಧ ಪಕ್ಷಗಳ ಎರಡನೇ ಸಭೆ: ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ಬೆಂಗಳೂರಿನಲ್ಲಿ ಪೋಸ್ಟರ್ ಪ್ರತ್ಯಕ್ಷ!

Ramyashree GN

ಬೆಂಗಳೂರು: ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ವಿರೋಧ ಪಕ್ಷಗಳ ನಾಯಕರು ಒಗ್ಗಟ್ಟಿನ ಮಂತ್ರಿ ಜಪಿಸುತ್ತಿದ್ದು, ಇಂದು ಬೆಂಗಳೂರಿನಲ್ಲಿ ಎರಡನೇ ವಿಪಕ್ಷಗಳ ಸಭೆಗೂ ಮುನ್ನ, ಬಿಹಾರದ ಸುಲ್ತಾನ್‌ಗಂಜ್ ಸೇತುವೆ ಕುಸಿತಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ಕಾರಣ ಎಂದು ದೂಷಿಸುವಂತ ಪೋಸ್ಟರ್‌ಗಳು ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಕಾಣಿಸಿಕೊಂಡಿವೆ.

ನಿತೀಶ್ ಕುಮಾರ್ ಭಾಗವಹಿಸುವ ಸಭೆಯ ಸ್ಥಳದಿಂದ ಕೇವಲ ಕಣ್ಣಳತೇ ದೂರದಲ್ಲೇ ಇರುವ 'ಚಾಲುಕ್ಯ ವೃತ್ತ'ದಲ್ಲಿ ಪೋಸ್ಟರ್‌ಗಳು ಕಂಡುಬಂದವು. ಈ ಬಗ್ಗೆ ತಿಳಿದ ತಕ್ಷಣವೇ ಪೊಲೀಸರು ಕಾರ್ಯಪ್ರವೃತ್ತರಾದರು.

ಒಂದು ಪೋಸ್ಟರ್‌ನಲ್ಲಿ, 'ಸುಲ್ತಾನ್‌ಗಂಜ್ ಸೇತುವೆ ಕುಸಿತವು ಬಿಹಾರಕ್ಕೆ ನಿತೀಶ್ ಕುಮಾರ್ ಅವರು ನೀಡಿದ ಕೊಡುಗೆಯಾಗಿದೆ' ಎಂದಿದ್ದು, ಬಿಹಾರದಲ್ಲಿನ ಸೇತುವೆಗಳೇ ಅವರ ಆಳ್ವಿಕೆಯನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ, ಅವರ ನೇತೃತ್ವವನ್ನು ವಿರೋಧ ಪಕ್ಷಗಳು ಹೇಗೆ ತಡೆದುಕೊಳ್ಳಲು ಸಾಧ್ಯ' ಎಂದು ಪ್ರಶ್ನಿಸಿದೆ.

ಮತ್ತೊಂದು ಪೋಸ್ಟರ್‌ನಲ್ಲಿ, 'ಅಸ್ಥಿರ ಪ್ರಧಾನಿ ಅಭ್ಯರ್ಥಿ. ಬೆಂಗಳೂರು ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಿದೆ. ಸುಲ್ತಾನ್‌ಗಂಜ್ ಸೇತುವೆ ಕುಸಿತಗೊಂಡ ಮೊದಲ ದಿನ ಏಪ್ರಿಲ್ 2022. ಸುಲ್ತಾನ್‌ಗಂಜ್ ಸೇತುವೆ ಕುಸಿತಗೊಂಡ ಎರಡನೇ ದಿನ ಜೂನ್ 2023' ಎಂದು ಹೇಳಲಾಗಿದೆ.

ಈ ಪೋಸ್ಟರ್‌ಗಳನ್ನು ಯಾರು ಹಾಕಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

SCROLL FOR NEXT