ರಾಜಕೀಯ

ಪ್ರಧಾನಿ ಮೋದಿ ಭೇಟಿ ಮಾಡಿದ ತೇಜಸ್ವಿನಿ ಅನಂತ್​ ಕುಮಾರ್: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ

Manjula VN

ನವದೆಹಲಿ/ಬೆಂಗಳೂರು: ಪಕ್ಷ ಬಿಡುವ ಮಾತೇ ಇಲ್ಲ ಎಂದು ಊಹಾಪೋಹಗಳಿಗೆ ತೆರೆ ಎಳೆದಿದ್ದ ಬಿಜೆಪಿಯ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್​ ಕುಮಾರ್​ ಅವರು, ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ದೆಹಲಿಯ ಸಂಸತ್ ಭವನದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಕೆಲ ದಿನಗಳಿಂದ ರಾಜ್ಯ ಬಿಜೆಪಿಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್ ಕುಮಾರ್ ಬಿಜೆಪಿಯ ನಡೆಗಳಿಂದ ನೊಂದಿದ್ದಾರಾ? ಬಿಜೆಪಿ ಬಿಟ್ಟು ಬೇರೊಂದು ಪಕ್ಷಕ್ಕೆ ಹಾರುತ್ತಾರಾ ಎಂೂ ಊಹಾಪೋಹಗಳು ಹರಿದಾಡುತ್ತಿದ್ದವು. ಈ ಊಹಾಪೋಹಗಳಿಗೆ ಟ್ವೀಟ್ ಮೂಲಕ ಬ್ರೇಕ್ ಹಾಕಿದ್ದರು.

ಇದರ ಬೆನ್ನಲ್ಲೇ ಪ್ರಧಾನಿ ಮೋದಿಯವರನ್ನು ಗುರುವಾರ ಭೇಟಿ ಮಾಡಿದ್ದು, ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲಗಳನ್ನು ಮೂಡಿಸಿದೆ.

ಮೋದಿಯವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿನಿ ಅವರು, ಕೆಲ ಸಭೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಹೀಗಾಗಿ ದೆಹಲಿಗೆ ಬಂದಿದ್ದೆ. ಇದೇ ವೇಳೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನೂ ಒಂದೆರಡು ದಿನಗಳಲ್ಲಿ ಭೇಟಿ ಮಾಡುತ್ತೇನೆಂದು ಹೇಳಿದರು.

ಸಭೆಯ ಹಿಂದೆ ಕೆಲ ರಾಜಕೀಯ ವಿಚಾರಗಳೂ ಇವೆ. ಸೂಕ್ತ ಸಮಯದಲ್ಲಿ ಎಲ್ಲದರ ಕುರಿತು ಮಾಹಿತಿ ನೀಡುತ್ತೇನೆಂದು ತಿಳಿಸಿದರು.

ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ಪ್ರಧಾನಿ ಮೋದಿಯವರು, ಈ ವೇಳೆ ತೇಜಸ್ವಿನಿಯವರನ್ನು ದೆಹಲಿಗೆ ಬಂದು ಭೇಟಿ ಮಾಡುವಂತೆ ಆಹ್ವಾನಿಸಿದ್ದರು. ಹೀಗಾಗಿ ಕುಟುಂಬ ಸದಸ್ಯರೊಂದಿಗೆ ಮೋದಿಯವರನ್ನು ಭೇಟಿ ಮಾಡಿದ್ದಾರೆಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ.

SCROLL FOR NEXT