ರಾಜಕೀಯ

ಗ್ಯಾರಂಟಿ ವಿಚಾರದಲ್ಲಿ ಕಾಂಗ್ರೆಸ್ ಮಾತು ತಪ್ಪಿದ್ದು, ನಿಜ ಬಣ್ಣ ಬಯಲಾಗಿದೆ: ಮಾಜಿ ಸಿಎಂ ಬೊಮ್ಮಾಯಿ

Manjula VN

ಬೆಂಗಳೂರು: ಗ್ಯಾರಂಟಿ ಯೋಜನೆಗಳ ಜಾರಿಗೊಳಿಸುವ ವಿಚಾರದಲ್ಲಿ ಕಾಂಗ್ರೆಸ್ ಮಾತು ತಪ್ಪಿದ್ದು, ಅದರ ನಿಜ ಬಣ್ಣ ಬಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶುಕ್ರವಾರ ಹೇಳಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಹೆಚ್ಚಿನ ಆದಾಯ ತರದೆ ಇರುವ ಹಣವನ್ನೇ ಖರ್ಚು ಮಾಡಿದರೆ ರಾಜ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ. ನಮ್ಮ ರಾಜ್ಯ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯವಾಗಿದೆ. ಈಗಿರುವ ಆರ್ಥಿಕ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಣೆ ಮಾಡದೆ ಹೋದರೆ, ಆರ್ಥಿಕ ಹೊರೆ ಬೀಳಲಿದೆ. ಇವರು ಯಾವ ರೀತಿಯ ಸಾಲ ಪಡೆಯುತ್ತಾರೆ ಎನ್ನುವುದು ಸ್ಪಷ್ಟವಾಗಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಚುನಾವಣೆ ಪೂರ್ವದಲ್ಲಿ ಜನರಿಗೆ ಬಹಳಷ್ಟು ಭರವಸೆ ತೋರಿಸಿತ್ತು. ಜನರ ನಿರೀಕ್ಷೆಗಳನ್ನು ದೊಡ್ಡ ಮಟ್ಟದಲ್ಲಿರಿಸಿಕೊಂಡು ಚುನಾವಣೆಯನ್ನೂ ಗೆದ್ದಿತು. ಆದರೆ, ಚುನಾವಣೆ ಪೂರ್ವ ಮಾತಿಗೂ ಚುನಾವಣೆ ನಂತರದ ಮಾತಿಗೂ ಬಹಳ ವ್ಯತ್ಯಾಸ ಇದೆ. ಈಗ ವಾರ್ಷಿಕ ಸರಾಸರಿ ಲೆಕ್ಕ ಹಾಕಿ ಉಚಿತ ವಿದ್ಯುತ್‌ ಕೊಡುವುದಾಗಿ ಮುಖ್ಯಮಂತ್ರಿಗಳು ಹೇಳುತ್ತಾರೆ. ಇದು ಇವರ ಹಿಡನ್‌ ಅಜೆಂಡಾ ಆಗಿದೆ. ಇದರಿಂದ ಸರಾಸರಿ 120 ರಿಂದ 125 ಯುನಿಟ್‌ ವ್ಯತ್ಯಾಸವಾಗುತ್ತದೆ. ಸರಾಸರಿ ಬಳಕೆ ಲೆಕ್ಕ ಹಾಕುವುದು ಹಿಡನ್‌ ಅಜೆಂಡಾ. ಇವರು ಗ್ಯಾರಂಟಿಯಲ್ಲಿ ದೋಖಾ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಅನ್ನಭಾಗ್ಯದಲ್ಲಿ ಹೆಚ್ಚುವರಿ ಐದು ಕೆ.ಜಿ. ಮಾತ್ರ ಕೊಡಲಾಗುತ್ತದೆ. ಕೇಂದ್ರ ಸರ್ಕಾರ ಆಹಾರ ಭದ್ರತೆ ಕಾಯ್ದೆಯಡಿ ಐದು ಕೆ.ಜಿ ಅಕ್ಕಿ ಕೊಡುತ್ತಿದೆ. ನಮ್ಮ ರಾಜ್ಯದಲ್ಲಿ ಐದು ಕೆ.ಜಿ ಅಕ್ಕಿಯ ಜೊತೆಗೆ ಒಂದು ಕೆ.ಜಿ. ರಾಗಿ, ಒಂದು ಕೆ.ಜಿ. ಜೋಳ ಕೊಡುತ್ತಿದ್ದೇವೆ. ಅದನ್ನು ಮುಂದುವರೆಸುತ್ತಾರೋ ಅಥವಾ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ ಎಂದರು.

ಗೃಹ ಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ದೋಖಾ ಇದೆ. ವಿಶೇಷವಾಗಿ ಬಡವರ ಮನೆಯಲ್ಲಿ ಹಿರಿಯ ಮಹಿಳೆಯರಿರುತ್ತಾರೆ. ಅವರಿಗೆ ಆನ್‌ಲೈನ್‌ ಅರ್ಜಿ ಹಾಕಲು ಹೇಳಿ ಅವರಿಗೆ ಯೋಜನೆ ಲಾಭ ಸಿಗದಂತೆ ಮಾಡುವ ಹುನ್ನಾರ ಅಡಗಿದೆ. ಎಲ್ಲ ಪಂಚಾಯತಿಗಳಲ್ಲಿ ಪಿಡಿಒಗಳಿದ್ದಾರೆ. ಅವರ ಮೂಲಕ ಮಾಹಿತಿ ಸಂಗ್ರಹಿಸಿ ಕೊಡಬೇಕಿತ್ತು. ಅರ್ಜಿ ಹಾಕಲು ಒಂದು ತಿಂಗಳು, ಪ್ರಕ್ರಿಯೆ ಮಾಡಲು ಒಂದು ತಿಂಗಳು ಕಾಲ ಹರಣ ಮಾಡುವ ಲೆಕ್ಕ ಇದರಲ್ಲಿ ಅಡಗಿದೆ ಎಂದು ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದಲ್ಲಿ ಎಸಿ ಬಸ್ಸು, ಐಷಾರಾಮಿ ಬಸ್‌ ಗಳಲ್ಲಿ ಇಲ್ಲ ಎಂದು ಹೇಳಿದ್ದಾರೆ. ಅಂದರೆ ಕೆಂಪು ಬಸ್‌ ಮಾತ್ರ ಗ್ಯಾರಂಟಿ ಅಂತ ಆಯಿತು. ಯುವ ನಿಧಿ ಯೋಜನೆಯನ್ನು 2022-23ರಲ್ಲಿ ಪಾಸಾದ ಪದವೀಧರರಿಗೆ ಕೊಡುವುದಾಗಿ ಹೇಳುತ್ತಾರೆ. ಪದವಿ ಮುಗಿಸಿದವರು ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೆರಳುತ್ತಾರೆ. ಹೀಗಾಗಿ ಹೆಚ್ಚಿನ ನಿರುದ್ಯೋಗಿಗಳಿಗೆ ಅನುಕೂಲ ಆಗುವುದಿಲ್ಲ. ಮತ್ತೆ ಈ ಯೋಜನೆಗಳ ಜಾರಿಗೆ ಎಷ್ಟು ಖರ್ಚಾಗುತ್ತದೆ ಎನ್ನುವುದನ್ನು ಕೂಡ ಹೇಳಿಲ್ಲ. ಸರ್ಕಾರಿ ನೌಕರರಿಗೆ ಶೇ 17 ರಷ್ಟು ವೇತನ ಹೆಚ್ಚಳ ಮಾಡಿರುವುದು ಜಾರಿಗೆ ಬಂದಿದೆ. ಅದನ್ನು ಮುಂದುವರೆಸಬೇಕು. ಈ ಯೋಜನೆಗಳು ಎಷ್ಟುದಿನ ಇರುತ್ತವೆ ಎನ್ನುವುದು ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಗೂ ರಾಜಕೀಯ ಹಿತಾಸಕ್ತಿಯ ಮೇಲೆ ನಿಂತಿರುತ್ತದೆ ಎಂದರು.

ವಾರ್ಷಿಕ ಸರಾಸರಿ ಲೆಕ್ಕ ಹಾಕಿ ಉಚಿತ ವಿದ್ಯುತ್‌ ಕೊಡುವುದಾಗಿ ಹೇಳುತ್ತಿರುವುದು ಮುಖ್ಯಮಂತ್ರಿಗಳ ಹಿಡನ್‌ ಅಜೆಂಡಾ. ಇದರಿಂದ ಸರಾಸರಿ 120ರಿಂದ 125 ಯುನಿಟ್‌ ವ್ಯತ್ಯಾಸವಾಗುತ್ತದೆ. ಇವರು ಗ್ಯಾರಂಟಿಯಲ್ಲಿ ಧೋಖಾ ಮಾಡುತ್ತಿದ್ದಾರೆಂದು ಕಿಡಿಕಾರಿದರು.

SCROLL FOR NEXT