ರಾಜಕೀಯ

'ರಾಜಕೀಯವಾಗಿ ಬೆಳೆಯುವ ದಿನಗಳಲ್ಲಿ ದೇವೇಗೌಡರ ಕುಟುಂಬ ರಾಜಕಾರಣದ ಅವಶ್ಯಕತೆ ಇತ್ತು, ಈಗ ಬೇಡವಾಗಿದೆ'

Shilpa D

ಅರಸೀಕೆರೆ: ಶಿವಲಿಂಗೇಗೌಡರು ರಾಜಕಾರಣಕ್ಕೆ ಪ್ರವೇಶ ಮಾಡಿ, ರಾಜಕೀಯವಾಗಿ ಬೆಳೆಯುವ ದಿನಗಳಲ್ಲಿ ಎಚ್.ಡಿ. ದೇವೇಗೌಡರ ಕುಟುಂಬ ರಾಜಕಾರಣದ ಅವಶ್ಯಕತೆ ಇತ್ತು. ಈಗ ಅವರಿಗೆ ಬೇಡವಾಗಿದೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ವಿಧಾನಸಭಾ ಅಧಿವೇಶನ ನಡೆಯುವಾಗ ಅವರ ಕ್ಷೇತ್ರದಿಂದ ಯಾವ ಜನಾಂಗದವರು ವಿಧಾನಸಭೆಯ ಗ್ಯಾಲರಿಯಲ್ಲಿ ಕುಳಿತಿರುತ್ತಾರೋ ಅವರನ್ನು ಓಲೈಸುವುದಕ್ಕಾಗಿ ಅವರನ್ನು ಮತ್ತು ಅವರ ಸಮಾಜವನ್ನು ಹೊಗಳುತ್ತಾರೆ. ನಾನು ಹತ್ತಿರವಿದ್ದು ಎಲ್ಲ ರೀತಿಯಲ್ಲೂ ಅರ್ಥೈಸಿಕೊಂಡಿದ್ದೇನೆ. ಹಾಸನ ಜಿಲ್ಲೆ ಮತ್ತು ಅರಸೀಕೆರೆ ಕ್ಷೇತ್ರದ ಅಭಿವೃದ್ಧಿಗೆ ನನ್ನ ಕೊಡುಗೆಯೂ ಇದೆ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.

ವಿಮಾನ ನಿಲ್ದಾಣಗಳನ್ನು ನಿರ್ಮಿಸಿದ ಮಾತ್ರಕ್ಕೆ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಿಲ್ಲ. ಚುನಾವಣಾ ಗಿಮಿಕ್‌ಗಾಗಿ ಪದೇ ಪದೇ ರಾಜ್ಯಕ್ಕೆ ಬರುತ್ತಿರುವ ಹಾಗೂ ರೈತರು ವಿಮಾನಗಳಲ್ಲಿ ಓಡಾಡಬೇಕು ಎಂದು ಹೇಳುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಮೊದಲು ದೇಶದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕ್ರಮ ಕೈಗೊಳ್ಳಲಿ ಎಂದು ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ನರೇಂದ್ರ ಮೋದಿಯವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭಗಳಲ್ಲಿ ರಾಜ್ಯದ ಜನತೆ, ರೈತರ ಸಮಸ್ಯೆ ಮತ್ತು ರಾಜ್ಯದ ನೀರಾವರಿ ಸಮಸ್ಯೆ ಬಗ್ಗೆ ಮಾತನಾಡುತ್ತಿಲ್ಲ ಎಂದರು. ಶಿವಮೊಗ್ಗಕ್ಕೆ ಬಂದಿದ್ದ ಅವರು, ಕೇವಲ ಒಂದು ಸಮಾಜವನ್ನು ಓಲೈಸುವ ನಿಟ್ಟಿನಲ್ಲಿ ಯಡಿಯೂರಪ್ಪ ಅವರನ್ನು ಹೊಗಳಿದ್ದಾರೆ. ಇದೆಲ್ಲ ಚುನಾವಣಾ ಗಿಮಿಕ್ ಅಷ್ಟೇ. ಈಗಲಾದರೂ ಯಡಿಯೂರಪ್ಪ ಅವರನ್ನು ಹೊಗಳಿದ್ದಾರಲ್ಲಾ ಸಂತಸದ ವಿಷಯ ಎಂದರು.

ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಅವರನ್ನು ಕೇಂದ್ರದ ಬಿಜೆಪಿ ನಾಯಕರು ಹೇಗೆ ನಡೆಸಿಕೊಂಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. 75 ವರ್ಷ ತುಂಬಿದವರು ಸಕ್ರಿಯ ರಾಜಕಾರಣದಲ್ಲಿ ಇರಬಾರದು ಎಂಬ ವಿಷಯವನ್ನು ಯಡಿಯೂರಪ್ಪನವರಿಗೆ ಮೊದಲೇ ಹೇಳಬಹುದಿತ್ತು ಎಂದರು.

SCROLL FOR NEXT