ರಾಜಕೀಯ

ಹೆಚ್‌ ಡಿ ಕುಮಾರಸ್ವಾಮಿ ಸಿಎಂ ಆಗಲು ಕಾಂಗ್ರೆಸ್ ತ್ಯಾಗ ಅಪಾರ; ನಾನು ಸತ್ತರೆ ದೊಡ್ಡಾಲಹಳ್ಳಿ ಮಣ್ಣಿನಲ್ಲಿ ಹೂಳ್ತಾರೆ: ಡಿ.ಕೆ.ಶಿವಕುಮಾರ್

Shilpa D

ರಾಮನಗರ: ಹೆಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಲು ಕಾಂಗ್ರೆಸ್‌ ತ್ಯಾಗ ಮಾಡಿತ್ತು. ಇದನ್ನು ನೀವು ಆಲೋಚಿಸಬೇಕು ಎಂದು ಜನತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌  ಹೇಳಿದ್ದಾರೆ.

ರಾಮನಗರದಲ್ಲಿ ಪ್ರಜಾಧ್ವನಿ ಯಾತ್ರೆ ಕೈಗೊಂಡಿದ್ದ ಡಿ.ಕೆ.ಶಿವಕುಮಾರ್ ಶುಕ್ರವಾರ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನ ಮಾಡಿದರು. ಕ್ಷೇತ್ರದ ಹಲವೆಡೆ ಬಹಿರಂಗ ಸಭೆಗಳನ್ನ ನಡೆಸಿದರು. ಈ ವೇಳೆ ಬೃಹತ್ ಬೈಕ್‌ ರ‍್ಯಾಲಿ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತಿಸಿದರು.

ಈ ವೇಳೆ ಮಾತನಾಡಿದ ಡಿಕೆಶಿ, ಜೆಡಿಎಸ್ ಹಾಗೂ ಹೆಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೇ ನಾನೂ ಕೂಡಾ ಇದೇ ಜಿಲ್ಲೆಯ ಮಗ. ನನಗೂ ಒಂದು ಅವಕಾಶ ಕೊಡಿ ಎನ್ನುವ ಮೂಲಕ ಮೂಲಕ ಸಿಎಂ ಆಸೆಯನ್ನು ಮತ್ತೊಮ್ಮೆ ಬಿಚ್ಚಿಟ್ಟರು.

ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಆಗಿದ್ದಾರೆ. ಅವರ ಕಾಲದಲ್ಲಿ ಏನಾದ್ರೂ ಸಾಧನೆ ಮಾಡಿದ್ದಾರಾ? ನಿಮ್ಮ ಬದುಕಿನಲ್ಲಿ ಯಾವುದಾದರು ಬದಲಾವಣೆ ತಂದಿದ್ದಾರಾ? ನಾನು ಇಂಧನ ಸಚಿವನಾಗಿದ್ದಾಗ ನಿಮಗೆ ಉಚಿತವಾಗಿ ಟ್ರಾನ್ಸ್‌ಫಾರ್ಮರ್ ಕೊಟ್ಟು, 10 ಹೆಚ್‌ಪಿ ವಿದ್ಯುತ್ ಕೊಟ್ಟೆವು. ಇಂದಿರಾ ಗಾಂಧಿ ಅವರ ಕಾಲದಲ್ಲಿ ಉಳುವವನಿಗೆ ಭೂಮಿ ನೀಡಿದ್ದೇವೆ.

ನಾನು ಕೂಡ ಇದೇ ಜಿಲ್ಲೆಯವನು, ಹೊರಗಿನಿಂದ ಬಂದಿಲ್ಲ. ನಾನು ಸತ್ತರೆ ದೊಡ್ಡಆಲಹಳ್ಳಿಗೆ ನನ್ನ ಹೆಣ ಹೋಗುತ್ತದೆ. ನಾವು ಎಲ್ಲರಿಗೂ ಸಹಾಯ ಮಾಡಿದ್ದೇವೆ. ಕುಮಾರಣ್ಣ ಅವರು ಸಿಎಂ ಆಗಲು ಬೆಂಬಲ ನೀಡಿದ್ದು ಕಾಂಗ್ರೆಸ್. ದೇವೇಗೌಡರನ್ನು ಮಾಜಿ ಪ್ರಧಾನಿ ಎಂದು ಕರೆಯುವಂತೆ ಮಾಡಲು ಕಾಂಗ್ರೆಸ್ ತ್ಯಾಗ ಮಾಡಿದೆ. ಇದನ್ನು ನೀವು ಆಲೋಚಿಸಬೇಕು ಎಂದರು.

ನಾನು ನಿಮ್ಮ ಮಗನಾಗಿದ್ದು, ನನಗೂ ಒಂದು ಅವಕಾಶ ನೀಡಿ ಎಂದು ದಳದ ಕಾರ್ಯಕರ್ತರಲ್ಲೂ ಮನವಿ ಮಾಡುತ್ತಿದ್ದೇನೆ. ನಾವು ಪ್ರಾಮಾಣಿಕವಾಗಿ ನಿಮ್ಮ ಸೇವೆ ಮಾಡುತ್ತೇವೆ. ಇಲ್ಲಿ ಕೇವಲ ಬಾಲಕೃಷ್ಣ ಮಾತ್ರ ಅಭ್ಯರ್ಥಿಯಲ್ಲ. ಡಿ.ಕೆ. ಶಿವಕುಮಾರ್ ಅಭ್ಯರ್ಥಿಯಾಗಿದ್ದಾರೆ ಎಂದು ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

SCROLL FOR NEXT