ರಾಜಕೀಯ

ಮಗನಿಗೆ ಅಸಮಾಧಾನ ಇದ್ದರೆ ಅವನನ್ನು ಕೇಳಿ, ನನಗೂ ವಿಜಯೇಂದ್ರಗೂ ಸಂಬಂಧ ಇಲ್ಲ: ವಿ ಸೋಮಣ್ಣ; ಎಲ್ಲಾ ಸರಿಯಿದೆ ಎಂದ ಬಿ ಎಸ್ ಯಡಿಯೂರಪ್ಪ

Sumana Upadhyaya

ಬೆಂಗಳೂರು/ದೆಹಲಿ: ಬೆಂಗಳೂರಿನಲ್ಲಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಭಾವುಕರಾಗಿ ಮಾತನಾಡುತ್ತಾ ಬೆಂಗಳೂರಿಗೆ ಬಂದ ಆರಂಭ ದಿನಗಳಲ್ಲಿ ತಾವು ಪಟ್ಟ ಕಷ್ಟ, ಜೀವನ, ರಾಜಕೀಯ ಜೀವನದ ಆರಂಭದ ಬಗ್ಗೆ ಮೆಲುಕು ಹಾಕುತ್ತಾ ಭಾವುಕರಾಗಿದ್ದ ಸಚಿವ ವಿ ಸೋಮಣ್ಣ ಇಂದು ಬುಧವಾರ ದೆಹಲಿಗೆ ತೆರಳಿದ್ದಾರೆ. ಅಲ್ಲಿ ಅವರು ವರಿಷ್ಠರನ್ನು ಭೇಟಿ ಮಾಡಲಿದ್ದಾರೆ.

ಬಿಜೆಪಿಯೊಳಗೆ ಎಲ್ಲವೂ ಸರಿಯಿಲ್ಲ, ಸೋಮಣ್ಣ ಮತ್ತು ಅವರ ಪುತ್ರ ಅರುಣನಿಗೆ ಬಿ ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಜೊತೆ ಅಸಮಾಧಾನವಿದೆ.

ಇಂದು ದೆಹಲಿಯಲ್ಲಿ ಪತ್ರಕರ್ತರು ಸೋಮಣ್ಣ ಅವರನ್ನು ಮಾತನಾಡಿಸಿದರು. ಆಗ ಕೂಡ ಭಾವೋದ್ರೇಕರಾಗಿ ಕಂಡುಬಂತು. ವಿಜಯೇಂದ್ರ ಬಗ್ಗೆ ನನ್ನ ಪುತ್ರನಿಗೆ ಅಸಮಾಧಾನವಿದ್ದರೆ ಅವನನ್ನೇ ಕೇಳಿ, ಅವನು ಚಿಕ್ಕ ಮಗುವಲ್ಲ, ಡಾಕ್ಟರಾಗಿದ್ದಾನೆ, ತಿಳುವಳಿಕೆ ಇದೆ, ಯೋಚನೆ ಮಾಡುವ ಶಕ್ತಿಯಿದೆ. ಅವನಿಗೀಗ 41, ನನಗೆ ಈಗ 72 ವರ್ಷ, ಅವನನ್ನೇ ಕೇಳಿ ಎಂದರು.

ವಿಜಯೇಂದ್ರನಿಗೂ ನನ್ನ ಮಗನಿಗೂ ಅಸಮಾಧಾನವಿದ್ದರೆ ನನಗೇನು ಸಂಬಂಧ, ವಿಜಯೇಂದ್ರ ಯಡಿಯೂರಪ್ಪನವರ ಮಗ, ಅವನ ಬಗ್ಗೆ ನನಗೆ ಗೌರವ ಇದೆ, ನನಗೆ 72 ವರ್ಷ ಅವನಿಗೆ 40 ವರ್ಷ, ಎಲ್ಲ ದೇವರು ನೋಡಿಕೊಳ್ಳುತ್ತಾರೆ ಎಂದರು. 

ಇದಕ್ಕೂ ಮುನ್ನ ಇಂದು ದೆಹಲಿಗೆ ಹೊರಡುವ ವೇಳೆ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸೋಮಣ್ಣ, ನಾನು ಹಲವು ಸಿಎಂಗಳ ಅಡಿಯಲ್ಲಿ ಕೆಲಸ ಮಾಡಿದ್ದೇನೆ, ನನ್ನ ನೇರ ಮಾತುಗಳಿಂದ ಕೆಲವು ಬಾರಿ ಹಿನ್ನಡೆ ಆಗಿದೆ ಎಂದರು.

ಯಡಿಯೂರಪ್ಪ ನಮ್ಮ ದೊಡ್ಡ ನಾಯಕರು, ಅವರು ಪಕ್ಷಕ್ಕಾಗಿ ದುಡಿದಿದ್ದಾರೆ, ಅವರ ಬಗ್ಗೆ ಗೌರವವಿದೆ, 15 ವರ್ಷದ ಹಿಂದೆ ಏನಾಗಿತ್ತು ಅನ್ನೋದು ಅವರಿಗೆ ಗೊತ್ತು. ನಾನು ಯಾವುತ್ತೂ ಇನ್ನೊಬ್ಬರ ಹಂಗಿನಲ್ಲಿ ಬದುಕಿಲ್ಲ, ಅಧಿಕಾರದ ವ್ಯಾಮೋಹವೂ ನನಗೆ ಇಲ್ಲ ಎಂದು ಹೇಳಿದ್ದಾರೆ. 

ಕೆಲವು ವಿಚಾರಗಳ ಬಗ್ಗೆ ವರಿಷ್ಠರ ಜತೆ ಚರ್ಚೆ ಮಾಡುವೆ, ಪ್ರಹ್ಲಾದ್ ಜೋಶಿಯವರು ಮಾತನಾಡೋಣ ಬನ್ನಿ ಎಂದಿದ್ದಾರೆ, ದೆಹಲಿಗೆ ಹೋಗಿ ವರಿಷ್ಠರು ನೀಡುವ ಸಂದೇಶದಂತೆ ಕೆಲಸ ಮಾಡುವೆ, ಪಕ್ಷದ ಬೆಳವಣಿಗಾಗಿ ದುಡಿಯುತ್ತೇನೆ ಎಂದಿದ್ಧಾರೆ. 

ಬಿ ಎಸ್ ಯಡಿಯೂರಪ್ಪ ಹೇಳಿಕೆ: ವಿ.ಸೋಮಣ್ಣ ದಿಢೀರ್ ದೇಹಲಿ ಭೇಟಿ ಬಗ್ಗೆ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ಏನಿಲ್ಲ. ಎಲ್ಲಾ ಸರಿ ಇದೆ. ಸೋಮಣ್ಣನವರು ದೇಹಲಿಗೆ ಹೋಗಿರೋದು ಬೇರೆ ಕಾರಣಕ್ಕೆ. ಯಾವುದೇ ಕಾರಣಕ್ಕೂ ಸೋಮಣ್ಣ ಪಕ್ಷ ಬಿಡಲ್ಲ. ನನಗೆ ಅವರ ಬಗ್ಗೆ ಗೌರವ ಇದೆ. ಸೋಮಣ್ಣ ನಮ್ಮ ಜೊತೆ ಇರ್ತಾರೆ, ಅವರ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ, ಅವರ ಬೆಂಬಲ ಪಕ್ಷದ ಗೆಲುವಿಗೆ ಬೇಕಾಗಿದೆ ಎಂದಿದ್ದಾರೆ.

SCROLL FOR NEXT