ರಾಜಕೀಯ

ದಕ್ಷಿಣ ಕರ್ನಾಟಕದಲ್ಲಿ ಜೆಡಿಎಸ್ ನೆಲೆ ನಾಶಪಡಿಸಲು ರಾಷ್ಟ್ರೀಯ ಪಕ್ಷಗಳಿಗೆ ಸಾಧ್ಯವಿಲ್ಲ: ಎಚ್‌ಡಿ ಕುಮಾರಸ್ವಾಮಿ

Manjula VN

ಚನ್ನರಾಯಪಟ್ಟಣ (ಹಾಸನ): ಬಿಜೆಪಿ ಮತ್ತು ಕಾಂಗ್ರೆಸ್‌ನಂತಹ ರಾಷ್ಟ್ರೀಯ ಪಕ್ಷಗಳು ದಕ್ಷಿಣ ಕರ್ನಾಟಕದಲ್ಲಿ ನಮ್ಮ ನೆಲೆಯನ್ನು ನಾಶಪಡಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಮಂಗಳವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತತ ಚುನಾವಣೆಗಳಲ್ಲಿ ಮಂಡ್ಯ, ಮೈಸೂರು ಮತ್ತು ಹಾಸನದಲ್ಲಿ ಜೆಡಿಎಸ್ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದೆ. ಹೀಗಾಗಿ ಈ ಕ್ಷೇತ್ರಗಳನ್ನೇ ರಾಷ್ಟ್ರೀಯ ಪಕ್ಷಗಳ ಹಿರಿಯ ನಾಯಕರು ಟಾರ್ಗೆಟ್ ಮಾಡಿಕೊಂಡಿದ್ದಾರೆ. ಈ ಭಾಗದ ಜನರು ಜೆಡಿಎಸ್ ಮೇಲೆ ನಂಬಿಕೆ ಇಟ್ಟಿದ್ದು, ಪ್ರತಿಪಕ್ಷಗಳು ಸುಳ್ಳು ಭರವಸೆ ನೀಡಿ ಆಮಿಷ ಒಡ್ಡಲು ಸಾಧ್ಯವಿಲ್ಲ ಎಂದು ಹೇಳಿದರು.

ಇದೇ ವೇಳೆ ಜೆಡಿಎಸ್ ಪಕ್ಷದಿಂದ ಉಚ್ಛಾಟಿತರಾಗಿರುವ ಗುಬ್ಬಿ ಶಾಸಕ ಶ್ರೀನಿವಾಸ್ ಅವರು ಪಕ್ಷಕ್ಕೆ ಬಂದರೆ ಸ್ವಾಗತ ಎನ್ನುವ ನಿಟ್ಟಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ನೀಡಿದ್ದ ಹೇಳಿಕೆಗೆ ಕುಮಾರಸ್ವಾಮಿಯವರು ಸಿಡಿಮಿಡಿಗೊಂಡರು.

ಪಕ್ಷದಲ್ಲಿ ನನ್ನ ನಿರ್ಧಾರವೇ ಅಂತಿಮವಾಗಿದ್ದು, ಪಕ್ಷದ ಕಾರ್ಯಕರ್ತರನ್ನು ಗೊಂದಲಕ್ಕೀಡು ಮಾಡುವಂತಹ ಆತುರದ ಹೇಳಿಕೆಗಳನ್ನು ನಾಯಕರು ನೀಡಬಾರದು ಎಂದರು.

ಗುಬ್ಬಿಯಿಂದ ನಾಗರಾಜ್ ಅವರನ್ನು ಕಣಕ್ಕಿಳಿಸುತ್ತಿದ್ದೇವೆ. ಹಾಸನದಲ್ಲಿ ಪಕ್ಷದ ಟಿಕೆಟ್ ವಿಚಾರದಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಜೆಡಿಎಸ್ ಪಕ್ಷದ ಕಾರ್ಯಕರ್ತರೊಬ್ಬರನ್ನು ಕಣಕ್ಕಿಳಿಸಲಿದ್ದು, ಈ ಕುರಿತು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಪುನರುಚ್ಚರಿಸಿದರು.

SCROLL FOR NEXT