ರಾಜಕೀಯ

ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು: ಬಿ.ಎಸ್.ಯಡಿಯೂರಪ್ಪ

Manjula VN

ಗದಗ: ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಮಂತ್ರಿಯಾಗಬೇಕೆಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಹಿರಿಯ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಹೇಳಿದರು.

ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಪಕ್ಷದ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ಸರ್ಕಾರ ಎಸ್‌ಸಿ ಮತ್ತು ಎಸ್‌ಟಿಗಳಿಗೆ ಮೀಸಲಾತಿ ನೀಡಿದೆ, ಯಾವುದೇ ಬಡವರು ನಿರಾಶ್ರಿತರಾಗದಂತೆ ನಾವು ಖಚಿತಪಡಿಸುತ್ತೇವೆ, ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹಾನ್ ವ್ಯಕ್ತಿ ಮತ್ತು ಅವರ ನಾಯಕತ್ವದಲ್ಲಿ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನಗಳನ್ನು ಗೆಲ್ಲುತ್ತೇವೆಂಬ ವಿಶ್ವಾಸವಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಹೇಳಿದರು.

ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಭಾಗ್ಯಲಕ್ಷ್ಮಿ ಬಾಂಡ್'ಗಳನ್ನು ನೀಡಿದ್ದೆ, ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅರ್ಹ ಮಹಿಳೆಯರಿಗೆ 1000 ರೂ. ನೀಡಲು ನಿರ್ಧರಿಸಿದ್ದಾರೆ. 2009 ರಿಂದ 2010 ರ ನಡುವೆ ನೇಕಾರರ ಸಾಲವನ್ನು ಮನ್ನಾ ಮಾಡಿದ್ದೆ.  ಇದೀಗ ನೇಕಾರರು ಶಾಂತಿಯುತವಾಗಿ ಜೀವನ ನಡೆಸುತ್ತಿದ್ದಾರೆ. ಡೈರಿ ಮಾಲೀಕರಿಗೆ ಬೆಂಬಲ ಬೆಲೆ ಮತ್ತು ರೈತರಿಗೆ ಉಚಿತ ಪಂಪ್ ಸೆಟ್, ವಿದ್ಯುತ್ ಅನ್ನು ನೀಡಿದ್ದೆ. ಮುಂದಿನ ದಿನಗಳಲ್ಲಿ ಕೆಲವು ಹೊಸ ಯೋಜನೆಗಳನ್ನು ತರುತ್ತೇವೆಂದು ತಿಳಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸೋಮಣ್ಣ ಅವರು ಕಾಂಗ್ರೆಸ್ ಸೇರುತ್ತಾರೆಂಬ ವರದಿಗಳ ಕುರಿತ ಪ್ರಶ್ನೆಗೆ ಉತ್ತರಿಸಿದರು. ಸೋಮಣ್ಣ ಎಲ್ಲೂ ಹೋಗುವುದಿಲ್ಲ. ಬಿಜೆಪಿಯಲ್ಲಿಯೇ ಇರುತ್ತಾರೆಂದು ಹೇಳಿದರು.

ರೋಣ ಶಾಸಕ ಕಳಕಪ್ಪ ಬಂಡಿಗೆ ಬಿಜೆಪಿ ಟಿಕೆಟ್ ನೀಡಲಿದೆಯೇ ಎಂಬುದರ ಕುರಿತ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದರು. ಬಂಡಿ ಅವರು ಉತ್ತಮ ಕೆಲಸ ಮಾಡಿದ್ದು, ಒಳ್ಳೆಯ ಕೆಲಸ ಮಾಡುವವರಿಗೆ ಬಿಜೆಪಿ ಸದಾ ಬೆಂಬಲ ನೀಡುತ್ತದೆ ಎಂದು ತಿಳಿಸಿದರು.

SCROLL FOR NEXT