ರಾಜಕೀಯ

ದಾವಣಗೆರೆ: ಪ್ರಧಾನಿ ಮೋದಿ ರ್ಯಾಲಿಗೆ 10 ಲಕ್ಷ ಜನರ ಸೇರಿಸಿ ಶಕ್ತಿ ಪ್ರದರ್ಶಿಸಲು ಬಿಜೆಪಿ ಸಜ್ಜು!

Manjula VN

ಬೆಂಗಳೂರು: ಮಾರ್ಚ್ 25 ರಂದು ದಾವಣಗೆರೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಡೆಸುತ್ತಿರುವ ರ್ಯಾಲಿಗೆ ಸುಮಾರು 10 ಲಕ್ಷ ಜನರನ್ನು ಸೇರಿಸಿ ಶಕ್ತಿ ಪ್ರದರ್ಶಿಸಲು ಬಿಜೆಪಿ ಸಜ್ಜಾಗಿದೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್‌ಸಿ ಎನ್‌.ರವಿಕುಮಾರ್‌ ಮಾತನಾಡಿ, ಸಮಾವೇಶದ ಹಿಂದಿನ ದಿನವಾದ ಮಾ.24ರಂದು ದಾವಣಗೆರೆ ಸುತ್ತಮುತ್ತಲಿನ 4 ಕ್ಷೇತ್ರಗಳಲ್ಲಿ ಬೃಹತ್‌ ರೋಡ್‌ ಶೋ ನಡೆಯಲಿದೆ. 25ರಂದು ಪ್ರಧಾನಿ ಮೋದಿ ಅವರು ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಭಾಷಣ ಮಾಡಲಿದ್ದಾರೆ. ರ್ಯಾಲಿಯಲ್ಲಿ ಇದುವರೆಗೂ ಸೇರಿರದಷ್ಟು ಜನರನ್ನ ಸೇರಿಸುವ ಗುರಿ ಇದೆ. ಅಂದಾಜು ಹತ್ತು ಲಕ್ಷ ಜನರನ್ನು ಸೇರಿಸುವ ಗುರಿ ಇದೆ. ಅದರ ಬಗ್ಗೆ ಒಂದು ಸಭೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಎಂದು ಹೇಳಿದರು.

ಕೇಂದ್ರ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ 45 ರಾಷ್ಟ್ರೀಯ ನಾಯಕರು, ಹಲವು ರಾಜ್ಯಗಳ 335 ನಾಯಕರು, 151 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರದಲ್ಲಿ ನಡೆಸಲಿದ್ದಾರೆ. ಇಲ್ಲಿಯವರೆಗೆ, ನಾಯಕರು 110 ರೋಡ್‌ಶೋಗಳು ಮತ್ತು 41 ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.

ಮಾರ್ಚ್ 21 ರೊಳಗೆ ಎಲ್ಲಾ 224 ಕ್ಷೇತ್ರಗಳಲ್ಲೂ ಪ್ರಚಾರ ನಡೆಸಲಾಗುತ್ತದೆ. ಮಂಡ್ಯ, ಕೋಲಾರ, ಮತ್ತು ರಾಜ್ಯಾದ್ಯಂತ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಮಾರು 60 ಲಕ್ಷ ಜನರು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಪಕ್ಷ ಬಲವರ್ಧನೆಯಾಗಬೇಕಿದ್ದ ಕಡೆ ಬಲವರ್ಧನೆ ಮಾಡುವುದೇ ಯಾತ್ರೆಯ ಉದ್ದೇಶವಾಗಿದ್ದು, ಆ ಉದ್ದೇಶ ಸಫಲವಾಗಿದೆ ಎಂದು ತಿಳಿಸಿದರು.

SCROLL FOR NEXT