ರಾಜಕೀಯ

ಜನಾರ್ದನ ರೆಡ್ಡಿಯ 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ'ಕ್ಕೆ ಫುಟ್ಬಾಲ್ ಚಿಹ್ನೆ; ಪ್ರಣಾಳಿಕೆ ಬಿಡುಗಡೆ

Sumana Upadhyaya

ಬೆಂಗಳೂರು: ಮಾಜಿ ಸಚಿವ, ಕರ್ನಾಟಕ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಮುಖ್ಯಸ್ಥ ಜನಾರ್ಧನ ರೆಡ್ಡಿ ಇಂದು ಸೋಮವಾರ ಬೆಂಗಳೂರಿನಲ್ಲಿ ಪಕ್ಷದ ಚಿಹ್ನೆ, ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. 

ಕಲ್ಯಾಣ ಪ್ರಗತಿ ಪಕ್ಷದ(Kalyana Rajya Pragati Paksha) ಚಿಹ್ನೆ ಫುಟ್ ಬಾಲ್ ಗುರುತನ್ನು ಬಿಡುಗಡೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಡಿಸೆಂಬರ್ ತಿಂಗಳಿನಿಂದಲೇ ನಾನು ನನ್ನ ಪಕ್ಷದ ಉದ್ದೇಶ, ಧ್ಯೇಯಗಳನ್ನು ಪ್ರಚಾರ ಮಾಡುತ್ತಿದ್ದೆ. ನಾನು ಊಹಿಸಿಕೊಂಡಿದ್ದಕ್ಕಿಂತ ಹೆಚ್ಚಿನ ಬೆಂಬಲ ಸಿಕ್ಕಿದೆ. ನನ್ನ ನಿರೀಕ್ಷೆ ಮೀರಿ ಜನರ ವಿಶ್ವಾಸ ಗಳಿಸಿಕೊಂಡಿದ್ದೇನೆ. 90 ದಿನಗಳಲ್ಲಿ 12 ಮಂದಿ ಅಭ್ಯರ್ಥಿ ಘೋಷಣೆ ಮಾಡಿದ್ದೇನೆ. ಇನ್ನು 19 ಅಭ್ಯರ್ಥಿಗಳನ್ನು ಇನ್ನೊಂದು ವಾರದಲ್ಲಿ ಘೋಷಣೆ ಮಾಡುತ್ತೇನೆ ಎಂದರು. 

ಇನ್ನೂ 20 ಕ್ಷೇತ್ರಗಳಲ್ಲಿ ಅಭ್ಯರ್ಥಿ ಹಾಕಿಲಿದ್ದೇವೆ. 51 ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಾಚರಣೆ ನಡೆಯುತ್ತಿದೆ. 30 ಕ್ಷೇತ್ರ ಗೆಲ್ಲುವ ವಿಶ್ವಾಸ ಇದೆ. ಗ್ರಾಮಗಳಲ್ಲಿ ಸಮಸ್ಯೆ ಕಣ್ಣಾರೆ ಕಂಡಿರುವವನು ನಾನು. ನಮ್ಮ ಭಾಗದ ಪ್ರತಿ ಜಿಲ್ಲೆಯಲ್ಲಿ ನಾನು ಓಡಾಡಿದ್ದೇನೆ. ಹದಿನೈದು ವರ್ಷಗಳ ಹಿಂದೆ ನಾನು ಆ ಭಾಗದಲ್ಲಿ ಓಡಾಡಿದ್ದೇನೆ. ಇತ್ತೀಚೆಗೆ ಈ ಭಾಗಗಳಲ್ಲಿ ಅಭಿವೃದ್ಧಿ ಆಗಿಲ್ಲ ಎಂದರು.

ಇದೇ ವೇಳೆ ಜನಾರ್ಧನ ರೆಡ್ಡಿ ತಮ್ಮ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದರು.ಪ್ರಣಾಳಿಕೆಯ ಭರವಸೆಗಳು ಹೀಗಿವೆ:

  • ಪ್ರತಿ ಮನೆಗೆ 250 ಯೂನಿಟ್ ಉಚಿತ ವಿದ್ಯುತ್
  • ಎಸ್‌ಟಿ, ಎಸ್‌ಸಿ ಉಚಿತ ನಿವೇಶನ
  • 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ಬಂಡವಾಳದ 15 ಸಾವಿರ ರೂಪಾಯಿ ನೆರವು
  • ರೈತರಿಗೆ ಬಡ್ಡಿ ರಹಿತ ಸಾಲ 
  • ಹೆಣ್ಣು ಮಕ್ಕಳ ಹೆಸರಿನಲ್ಲಿ ಮನೆ ಇಲ್ಲದೆ ಇರುವವರಿಗೆ 2 ಬಿಹೆಚ್‌ಕೆ ಮನೆ
  • ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಮಾನ ವೇತನ
  • ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ
  • ಮಹಿಳೆಯರ ಭದ್ರತೆಗಾಗಿ ಹೊಸ ಮಹಿಳೆಯರ ತಂಡ ಸ್ಥಾಪನೆ
  • ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ 1,000 ರೂಪಾಯಿ ವೇತನ ಹೆಚ್ಚಳ
  • ಆರ್ಥಿಕ ದೌರ್ಬಲ್ಯ ಮಕ್ಕಳಿಗೆ ಉಚಿತ ಶಿಕ್ಷಣ ಇತ್ಯಾದಿಗಳಾಗಿವೆ.
SCROLL FOR NEXT