ರಾಜಕೀಯ

ರಾಹುಲ್ ಗಾಂಧಿ ‘ಸತ್ಯಮೇವ ಜಯತೆ’ ಪ್ರಚಾರಾಂದೋಲನ ಏಪ್ರಿಲ್ 9ಕ್ಕೆ ಮುಂದೂಡಿಕೆ

Nagaraja AB

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏಪ್ರಿಲ್ 5 ರಂದು ಕೋಲಾರದಲ್ಲಿ ಚಾಲನೆ ನೀಡಬೇಕಿದ್ದ 'ಸತ್ಯಮೇವ ಜಯತೇ' ಪ್ರಚಾರಾಂದೋಲನವನ್ನು ಏಪ್ರಿಲ್ 9 ಕ್ಕೆ ಮುಂದೂಡಲಾಗಿದೆ. ರಾಹುಲ್ ಗಾಂಧಿ ಕಾನೂನು ತಜ್ಞರೊಂದಿಗೆ ಮತ್ತಷ್ಟು ಸಮಲೋಚನೆ ನಡೆಸುತ್ತಿರುವುದರಿಂದ ಕೋಲಾರ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎನ್ನಲಾಗಿದೆ. 

ಲೋಕಸಭಾ ಸದಸ್ಯತ್ವದಿಂದ ಅನರ್ಹತೆಗೆ ಸಂಬಂಧಿಸಿದಂತೆ ಕಾನೂನು ಹೋರಾಟ ಕುರಿತ ಚರ್ಚೆಯಲ್ಲಿ ನಿರತರಾಗಿರುವುದರಿಂದ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಆದರೆ ಇನ್ನೊಂದು ಮೂಲದ ಪ್ರಕಾರ ಏಪ್ರಿಲ್ 5 ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಚುನಾವಣಾ ಸಮಿತಿ  ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

2019 ರ ಲೋಕಸಭಾ ಚುನಾವಣೆ ಪೂರ್ವದಲ್ಲಿ ಕೋಲಾರದಲ್ಲಿ 'ಮೋದಿ' ಉಪನಾಮದ ಕುರಿತು ನೀಡಿದ  ಹೇಳಿಕೆಗಾಗಿ ರಾಹುಲ್ ಅವರನ್ನು ಗುಜರಾತ್‌ನ ಸೂರತ್ ನ್ಯಾಯಾಲಯವು ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿದ ನಂತರ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ಹೀಗಾಗಿ ಅವರ ಅನರ್ಹತೆ ವಿರುದ್ಧ ಕೋಲಾರದಿಂದ 'ಸತ್ಯಮೇವ ಜಯತೆ' ಹೋರಾಟ ಆರಂಭಿಸಲು ಅವರು ಬಯಸಿದ್ದರು. ಈ ಸಂಬಂಧ  ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಇತರರನ್ನು ಒಳಗೊಂಡ ಕಾಂಗ್ರೆಸ್ ಪೂರ್ವಭಾವಿ ಸಭೆ ಶುಕ್ರವಾರ ನಡೆದಿದೆ.

SCROLL FOR NEXT