ರಾಜಕೀಯ

ವಿಧಾನಸಭಾ ಚುನಾವಣೆ: ಹೈಕಮಾಂಡ್ ಸೂಚಿಸಿದರೆ ಕೋಲಾರ ಕೈಬಿಡಲು ಸಿದ್ದರಾಮಯ್ಯ ನಿರ್ಧಾರ!

Manjula VN

ಕೋಲಾರ: ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಹಾಗೂ ಕೋಲಾರ ವಿಧಾನಸಭಾ ಕ್ಷೇತ್ರಗಳೆರಡಲ್ಲೂ ಸ್ಪರ್ಧೆಗಿಳಿಯಲು ನಿರ್ಧರಿಸಿರುವ ವಿರೋಧ ಪಕ್ಷಧ ನಾಯಕ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಅವರು, ಹೈಕಮಾಂಡ್ ಸೂಚಿಸಿದ್ದೇ ಆದರೆ, ಕೋಲಾರ ಕೈಬಿಟ್ಟು, ವರುಣಾದಿಂದ ಸ್ಪರ್ಧಿಸುವ ನಿರ್ಧಾರಕ್ಕೆ ಬಂದಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ಸಿದ್ದರಾಮಯ್ಯ ಅವರಿಗೆ ಕೋಲಾರ ಸೇಫ್ ಅಲ್ಲ ಎಂಬ ವರದಿಗಳು ಬಂದ ಹಿನ್ನೆಲೆಯಲ್ಲಿ, ಕೋಲಾರ ಕೈಬಿಟ್ಟು, ವರುಣಾದಿಂದ ಸ್ಪರ್ಧೆಗಿಳಿಯಲು ನಿರ್ಧರಿಸಿದ್ದಾರೆಂದು ವರದಿಗಳು ತಿಳಿಸಿವೆ.

ರಾಹುಲ್ ಗಾಂಧಿಯವರ ಒಪ್ಪಿಗೆ ಮೇರೆಗೆ ಈಗಾಗಲೇ ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿಯಲ್ಲಿ ವರುಣಾ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ಆದರೆ, ಕೋಲಾರ ಕ್ಷೇತ್ರಕ್ಕಿನ್ನೂ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿಲ್ಲ.

ಹೈಕಮಾಂಡ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಒಪ್ಪಿಗೆ ನೀಡಿದ್ದೇ ಆದರೆ, ಕೋಲಾರದಿಂದಲೂ ಸ್ಪರ್ಧಿಸಲು ಸಿದ್ದರಾಮಯ್ಯ ಅವರು ನಿರ್ಧರಿಸಿದ್ದಾರೆ. ಆದರೆ, ಒಂದು ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸುವಂತೆ ಸೂಚಿಸಿದರೆ, ಕೋಲಾರದ ಬದಲಿಗೆ ವರುಣಾದಿಂದ ಸ್ಪರ್ಧಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.

ಕೆಲ ದಿನಗಳ ಹಿಂದಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿದ್ದರಾಮಯ್ಯ ಅವರು, ಇದು ನನ್ನ ಕೊನೆಯ ಚುನಾವಣೆ. ಕೋಲಾರದಿಂದ ಸ್ಪರ್ಧಿಸುವಂತೆ ಪಕ್ಷದ ಕಾರ್ಯಕರ್ತರು ಒತ್ತಡ ಹೇರಿದ್ದು, ಈ ಕ್ಷೇತ್ರದಲ್ಲೂ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದರು.

ಸಿದ್ದರಾಮಯ್ಯ ಅವರು ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ತವರು ಕ್ಷೇತ್ರವಾಗಿದ್ದ ಚಾಮುಂಡೇಶ್ವರಿಯಲ್ಲಿ ಭಾರೀ ಅಂತರದಿಂದ ಸೋಲು ಕಂಡಿದ್ದರು. ಇದನ್ನು ಪರಿಗಣಿಸಿರುವ ರಾಹುಲ್ ಗಾಂಧಿಯವರು, ಸಿದ್ದರಾಮಯ್ಯನವರಿಗೆ ಒಂದೇ ಕ್ಷೇತ್ರದತ್ತ ಗಮನಹರಿಸಿ ರಾಜ್ಯಾದ್ಯಂತ ಪಕ್ಷದ ಪರ ಪ್ರಚಾರ ಮಾಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ, ಸಿದ್ದರಾಮಯ್ಯ ಅವರಿಗೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷ ಟಿಕೆಟ್ ನೀಡದಿದ್ದರೆ ಈ ಕ್ಷೇತ್ರದ ಟಿಕೆಟ್‌ಗಾಗಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಲಾಬಿ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರು ಕೂಡ ಸಿದ್ದರಾಮಯ್ಯ ಒಂದು ಸ್ಥಾನದಿಂದ ಸ್ಪರ್ಧಿಸಬೇಕೆಂದು ಬಯಸುತ್ತಿದ್ದಾರೆ ಎಂದು ಆಕಾಂಕ್ಷಿಯೊಬ್ಬರು ಹೇಳಿದ್ದಾರೆ. ಆದರೆ, ಸಿದ್ದರಾಮಯ್ಯ ಅವರ ಆಪ್ತರೊಬ್ಬರು, “ಅವರು ಎರಡು ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸುತ್ತಿದ್ದು, ಒಂದು ವೇಳೆ ಸಿದ್ದರಾಮಯ್ಯ ಅವರು ಎರಡು ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದೇ ಆದರೆ, ರಾಹುಲ್ ಕೂಡ ವಿರೋಧಿಸುವುದಿಲ್ಲ ಎಂದು ಹೇಳಿದ್ದಾರೆ.

SCROLL FOR NEXT