ರಾಜಕೀಯ

ಹುಲಿ ಜೊತೆಯಲ್ಲಿ ಹುಲಿಯೇ ಫೈಟ್ ಮಾಡಬೇಕು, ಆಡು ಕಟ್ಟಿದರೆ ತಿಂದುಕೊಂಡು ಹೋಗುತ್ತೆ: ವಿಜಯೇಂದ್ರಗೆ ಕಾರ್ಯಕರ್ತರ ಒತ್ತಾಯ

Sumana Upadhyaya

ಮೈಸೂರು: ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಇಂದು ಗೊಂದಲಗಳಿಗೆ ತೆರೆ ಎಳೆಯುವ ಕೆಲಸ ಮಾಡಿದ್ದಾರೆ.

ಆದರೆ ಇಂದು ಮೈಸೂರಿಗೆ ಭೇಟಿ ನೀಡಿರುವ ಬಿ.ವೈ.ವಿಜಯೇಂದ್ರ ಎದುರೇ ಕಾರ್ಯಕರ್ತರು ವರುಣಾದಲ್ಲಿ ಸ್ಪರ್ಧೆ ಮಾಡುವಂತೆ ಒತ್ತಾಯ ಹಾಕಿದ್ದಾರೆ. ನೀವಲ್ಲದೆ ಬೇರೆ ಯಾರೇ ಬಂದರೂ ಕ್ಷೇತ್ರದಲ್ಲಿ ಗೆಲ್ಲಲ್ಲ. ಹುಲಿ ಜೊತೆಯಲ್ಲಿ ಹುಲಿಯೇ ಫೈಟ್ ಮಾಡಬೇಕು. ಆಡು ಕಟ್ಟಿದರೆ ತಿಂದುಕೊಂಡು ಹೋಗುತ್ತೆ ಎಂದು ಕಾರ್ಯಕರ್ತರು ಒತ್ತಾಯ ಮಾಡಿದ್ದಾರೆ.

ಕಾರ್ಯಕರ್ತರನ್ನು ಕೈ ಬಿಡಬಾರದು: ವಿಜಯೇಂದ್ರ ಬಂದರೆ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಕಾಂಗ್ರೆಸ್ ತಂದೆ- ಮಕ್ಕಳ ಪ್ರಶ್ನೆ ನಡುವೆ ಕಾರ್ಯಕರ್ತರನ್ನು ಕೈ ಬಿಡಬಾರದು. ಹಳೇ ಮೈಸೂರು ಭಾಗದ ಇತರೆ ಕ್ಷೇತ್ರಗಳಿಗೂ ಶಕ್ತಿ ಬರುತ್ತೆ. ನೀವು ಬಂದು ಸ್ಪರ್ಧೆ ಮಾಡಲೇಬೇಕು. ನೀವು ಬನ್ನಿ, ಇಲ್ಲವಾದರೆ ಊಟಕ್ಕೆ ವಿಷ ಹಾಕಿ ಕೊಡಿ ಎಂದು ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಕಾರ್ಯಕರ್ತರು ಆಗ್ರಹ ಮಾಡಿದ ಪ್ರಸಂಗ ನಡೆಯಿತು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಅವರ ಹೊಡೆತ ತಡೆಯಲು ಆಗುತ್ತಿಲ್ಲ. 15 ವರ್ಷದಿಂದ ಕಾರ್ಯಕರ್ತರು ತಬ್ಬಲಿ ಆಗಿದ್ದೇವೆ. ನೀವು ರಾಜ್ಯ ನಾಯಕರು. ಶಿಕಾರಿಪುರ, ವರುಣಾ ಎರಡೂ ಕಡೆ ನಿಲ್ಲಿ. ಆದರೆ ವರುಣಾ ಮಾತ್ರ ಕೈಬಿಡಬೇಡಿ. ನೀವು ಮನಸ್ಸು ಮಾಡಿದರೆ ವರುಣಾದಿಂದ ಎಂಎಲ್‌ಎ ಮಾಡಬಹುದು ಎಂದು ಒತ್ತಡ ಹೇರಿದ್ದಾರೆ.

ವಿಜಯೇಂದ್ರ ನಾನು ಪ್ರತಿನಿಧಿಸುತ್ತಾ ಬಂದಿರುವ ನನಗೆ ರಾಜಕೀಯ ಜನ್ಮ ಕೊಟ್ಟ ಶಿಕಾರಿಪುರದಿಂದಲೇ ಸ್ಪರ್ಧಿಸುವುದು, ಈ ಬಗ್ಗೆ ಹೈಕಮಾಂಡ್ ಮನವೊಲಿಸುತ್ತೇನೆ. ವರುಣಾ ಕ್ಷೇತ್ರಕ್ಕೆ ಬೇರೆ ಸಮರ್ಥ ಅಭ್ಯರ್ಥಿಯನ್ನು ಹಾಕುತ್ತೇವೆ ಎಂದು ಯಡಿಯೂರಪ್ಪನವರು ಇಂದು ಸ್ಪಷ್ಟಪಡಿಸಿದ್ದು, ತಂದೆಯವರ ಇಚ್ಛೆಯಂತೆ ಹೈಕಮಾಂಡ್ ನಿರ್ಣಯದಂತೆ ಸ್ಪರ್ಧಿಸುತ್ತೇನೆ ಎಂದು ವಿಜಯೇಂದ್ರ ಹೇಳಿದ್ದಾರೆ.

SCROLL FOR NEXT