ರಾಜಕೀಯ

ವರುಣಾ ಬಿಜೆಪಿಯ ಭದ್ರಕೋಟೆ, ಯಾರೇ ನಿಂತರೂ ಇಲ್ಲಿ 20-30 ಸಾವಿರ ಮತಗಳ ಅಂತರದಿಂದ ಗೆಲ್ಲುವ ಸಾಮರ್ಥ್ಯವಿದೆ: ಬಿ ವೈ ವಿಜಯೇಂದ್ರ

Sumana Upadhyaya

ಮೈಸೂರು: ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿರುವ ಸಿದ್ದರಾಮಯ್ಯನವರ ಎದುರು ಬಿಜೆಪಿ ಯಾವ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆ ಎಂಬುದು ಬಹುಚರ್ಚೆಯ ವಿಷಯವಾಗಿದೆ.

ಈ ಬಗ್ಗೆ ಇಂದು ಮೈಸೂರಿನಲ್ಲಿ ವರುಣ ಕ್ಷೇತ್ರದ ಕಾರ್ಯಕರ್ತರ ಜತೆ ವಿಜಯೇಂದ್ರ ಸಭೆ ನಡೆಸಿದ್ದಾರೆ. ಇದಕ್ಕೂ ಮುನ್ನ ಅವರು ಮೈಸೂರಿನಲ್ಲಿ ನೀಡಿರುವ ಹೇಳಿಕೆ, ಬಿ ಎಸ್ ಯಡಿಯೂರಪ್ಪನವರು ಆಡಿರುವ ಮಾತುಗಳು ಬಹುಮುಖ್ಯವಾಗಿವೆ.

 ವರುಣದಲ್ಲೇ ಸ್ಪರ್ಧಿಸಿ ಎಂದು ವಿಜಯೇಂದ್ರಗೆ ಕಾರ್ಯಕರ್ತ ಒತ್ತಾಯ ಹೇರುತ್ತಿದ್ದಾರೆ. ಅದಕ್ಕೆ ಇಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ವಿಜಯೇಂದ್ರ, ನಾನು ಚುನಾವಣೆಗೆ ನಿಲ್ಲಬೇಕೊ, ಬೇಡವೋ, ನಿಂತರೆ ಎಲ್ಲಿ ನಿಲ್ಲಬೇಕು ಎಂದು ಪಕ್ಷ ಹೈಕಮಾಂಡ್ ಇನ್ನೂ ನಿರ್ಧಾರ ಮಾಡಿಲ್ಲ, ಹೈಕಮಾಂಡ್ ತೀರ್ಮಾನವೇ ಅಂತಿಮ.

ವರುಣಾ ಬೇರೆಯಲ್ಲ, ಶಿಕಾರಿಪುರ ಬೇರೆ ಅಲ್ಲ: ನಮ್ಮ ಶಿಕಾರಿಪುರ ತಾಲ್ಲೂಕು, ತಂದೆಯವರು ಪ್ರತಿನಿಧಿಸಿಕೊಂಡು ಬಂದ ಕ್ಷೇತ್ರ. ತಂದೆಯವರಿಗೆ ಅಲ್ಲಿ ಪ್ರೀತಿ ಹೆಚ್ಚಾಗಿರುತ್ತದೆ. ತಂದೆಯವರಿಗೆ ರಾಜಕೀಯ ಜನ್ಮ ಕೊಟ್ಟ ಕ್ಷೇತ್ರ ಹಾಗಾಗಿ ನಮಗೆ ಹೆಮ್ಮೆಯಿದೆ. ಹಾಗೆಂದು ವರುಣಾ ಬೇರೆ ಎಂದು ನಾವಂದುಕೊಂಡಿಲ್ಲ. ನನ್ನನ್ನು ರಾಜಕೀಯವಾಗಿ ಪರಿಚಯಮಾಡಿಕೊಟ್ಟ ಕ್ಷೇತ್ರ ವರುಣಾ.ಹಾಗಾಗಿ ಪಕ್ಷ ಏನೇ ನಿರ್ಧಾರ ಮಾಡಿದರೂ ಕೂಡ ವರುಣಾ ಕ್ಷೇತ್ರದ ಬಗ್ಗೆ ನನ್ನ ಮನಸ್ಸಿನಲ್ಲಿ ವಿಶೇಷ ಸ್ಥಾನವಿದೆ ಎಂದರು.

ಹಿಂದೆ ಆದ ಕಹಿ ಘಟನೆಗಳು ಯಾವುದೇ ಮರುಕಳಿಸಬಾರದು, ಇದರಿಂದ ನಮಗೆ, ಪಕ್ಷಕ್ಕೆ, ತಂದೆಯವರಿಗೆ ನೋವಾಗುತ್ತದೆ. ಹೀಗಾಗಿ ಎಲ್ಲವನ್ನೂ ಆಲೋಚನೆ ಮಾಡಿಕೊಂಡು ಇಂದು ನಿಮ್ಮನ್ನೆಲ್ಲ ಮಾತನಾಡಿಸಲು ಬಂದಿದ್ದೇನೆ, ವರುಣಾ ಕ್ಷೇತ್ರ ಭಾರತೀಯ ಜನತಾ ಪಾರ್ಟಿಯ ಭದ್ರಕೋಟೆ. ಯಾರೇ ನಿಂತರೂ ಕೂಡ ಎದುರಾಳಿಯಿಂದ 20-30 ಸಾವಿರ ಮತಗಳ ಅಂತರದಿಂದ ಗೆಲ್ಲುವುದಕ್ಕೆ ಏನೂ ತೊಂದರೆಯಿಲ್ಲ. ಇಲ್ಲಿ ಯಾರು ನಿಂತರೂ ಗೆಲ್ಲುವ ಸಾಮರ್ಥ್ಯವಿದೆ ಎಂದರು.

ಕ್ಷೇತ್ರದಲ್ಲಿ ಕಾರ್ಯಕರ್ತರು ವಿಶ್ವಾಸ ಬರುವ ರೀತಿಯಲ್ಲಿ ನಡೆದುಕೊಳ್ಳಬೇಕು. ಎಲ್ಲರೂ ಒಟ್ಟಾಗಿ ಚುನಾವಣೆಯವರೆಗೆ ಕೆಲಸ ಮಾಡಿ ಹೋರಾಡೋಣ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು. 

SCROLL FOR NEXT