ಬೆಂಗಳೂರು: ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆ ಪ್ರಚಾರದ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೋಮವಾರ ಬೆಂಗಳೂರಿನಲ್ಲಿ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿದರು.
ರಾಜರಾಜೇಶ್ವರಿ ನಗರ ಹಾಗೂ ಕೆಂಗೇರಿ ಸ್ಯಾಟ ಲೈಟ್ ಟೌನ್ ನಲ್ಲಿ ಜೆಪಿ ನಡ್ಡಾ ನಡೆಸಿದ ರೋಡ್ ಶೋನಲ್ಲಿ ಅಪಾರ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದರು. ರೋಡ್ ಶೋ ಮಾರ್ಗದುದ್ದಕ್ಕೂ ಬಿಜೆಪಿ ಧ್ವಜ ಹಿಡಿದು ಸಾಗಿದ ಬಿಜೆಪಿ ಕಾರ್ಯಕರ್ತರು ಜೆ.ಪಿ. ನಡ್ಡಾ ಅವರ ಮೇಲೆ ಹೂ ಮಳೆ ಸುರಿದು, ಘೋಷಣೆ ಕೂಗಿ ಬೆಂಬಲ ವ್ಯಕ್ತಪಡಿಸಿದರು.
ಈ ಮಧ್ಯೆ ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ, ನರೇಂದ್ರ ಮೋದಿ ಅವರನ್ನು ನಾಲಾಯಕ್ ಎಂದು ಕರೆದಿರುವ ಕುರಿತು ಪ್ರತಿಕ್ರಿಯಿಸಿದ ಜೆ.ಪಿ. ನಡ್ಡಾ. ಕಾಂಗ್ರೆಸ್ ಈಗಾಗಲೇ ಚುನಾವಣೆಯಲ್ಲಿ ಸೋತಿದೆ. ಆದ್ದರಿಂದಲೇ "ಹತಾಶೆ"ಯಲ್ಲಿರುವ ಅದರ ನಾಯಕರಿಂದ "ವಿಷ" ಹೊರಬರುತ್ತಿದೆ. ಜನರು ಇಂತಹ ಭಾಷೆಯನ್ನು ಒಪ್ಪುವುದಿಲ್ಲ ಮತ್ತು ಪ್ರಧಾನಿಯವರ ಮೇಲಿನ ಪ್ರೀತಿ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಇದಕ್ಕೂ ಮುನ್ನಾ ಜೆಪಿ ನಡ್ಡಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್, ಯಡಿಯೂರಪ್ಪ ಮತ್ತಿತರರ ಸಮ್ಮುಖದಲ್ಲಿ ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.