ರಾಜಕೀಯ

ತುಮಕೂರಿನಲ್ಲಿ ಅಬ್ಬರದ ಪ್ರಚಾರ: ರಕ್ಷಣಾ ಕ್ಷೇತ್ರ ಕಾಂಗ್ರೆಸ್‌ಗೆ ಲೂಟಿ ಮಾಡಲು 'ಕ್ಲಬ್‌' ಆಗಿತ್ತು: ಪ್ರಧಾನಿ ನರೇಂದ್ರ ಮೋದಿ

Ramyashree GN

ತುಮಕೂರು: ಮುಂದಿನ ವಾರ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ ಪ್ರಧಾನಿ ನರೇಂದ್ರ ಮೋದಿ, ಕೈ ಪಕ್ಷವು ಶೇ 85 ರಷ್ಟು ಕಮಿಷನ್‌ಗಾಗಿ ರಕ್ಷಣಾ ಆಮದುಗಳನ್ನು ಅವಲಂಬಿಸಿತ್ತು ಎಂದು ಶುಕ್ರವಾರ ಹೇಳಿದ್ದಾರೆ.

ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಕಮಿಷನ್ ಇಲ್ಲದೆ ಯಾವುದೇ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯವಹಾರ ನಡೆದಿಲ್ಲ ಎಂದು ಆರೋಪಿಸಿದ್ದಾರೆ.

ರಫೇಲ್ ಡೀಲ್‌ನಲ್ಲಿ ಅಕ್ರಮಗಳು ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಉದ್ಯೋಗಗಳನ್ನು ಕಿತ್ತುಕೊಂಡಿರುವ ಒಪ್ಪಂದ ಕುರಿತಂತೆ ಆರೋಪಗಳಿಗಾಗಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡ ಮೋದಿ, ಮಾಜಿ ಸಂಸದ ಮತ್ತು ಇತರ ಕಾಂಗ್ರೆಸ್ ನಾಯಕರು ಈಗ ಪಿಎಸ್‌ಯು ಬಗ್ಗೆ ಮಾತನಾಡುವುದನ್ನು ಏಕೆ ನಿಲ್ಲಿಸಿದ್ದಾರೆ ಎಂದು ಪ್ರಶ್ನಿಸಿದರು. 'ಅವರು ಸುಮಾರು 4-5 ವರ್ಷಗಳ ಹಿಂದೆ ಸುಳ್ಳುಗಳನ್ನು ಹರಡಿದರು. ಅವರು ಎಚ್‌ಎಎಲ್‌ ನೌಕರರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ' ಎಂದು ಮೋದಿ ಹೇಳಿದರು.

'ಕಾಂಗ್ರೆಸ್‌ಗೆ ರಕ್ಷಣಾ ಕ್ಷೇತ್ರವೆಂದರೆ ಮಾಮಾಗಳು, ಚಾಚಾಗಳು ಮತ್ತು ಸಂಬಂಧಿಕರು ರಾಷ್ಟ್ರವನ್ನು ಲೂಟಿ ಮಾಡುವ ಕ್ಲಬ್ ಆಗಿತ್ತು. ಇದು ಕಾಂಗ್ರೆಸ್ಸಿನ 85% ಕಮಿಷನ್ ಆಗಿತ್ತು. ಇದು ಎಚ್‌ಎಎಲ್ ಅನ್ನು ನಾಶ ಮಾಡಿದೆ. ಪಿಎಸ್‌ಯು ಪ್ರಾರಂಭವಾದ ನಂತರ ಮೊದಲ ಬಾರಿಗೆ ದಾಖಲೆಯ ಲಾಭ ಗಳಿಸುತ್ತಿರುವ ಕಾರಣ ಈ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಎಚ್‌ಎಎಲ್ ಬಗ್ಗೆ ಮಾತನಾಡುತ್ತಿಲ್ಲ. ಬಿಜೆಪಿ ಸರ್ಕಾರವು ತನ್ನ ‘ಮೇಕ್ ಇನ್ ಇಂಡಿಯಾ’ ಪರಿಕಲ್ಪನೆಯ ಭಾಗವಾಗಿ ರಕ್ಷಣಾ ಸಾಧನಗಳನ್ನು ತಯಾರಿಸಲು ಆಧುನಿಕ ಕಾರ್ಖಾನೆಯನ್ನು ಸ್ಥಾಪಿಸಿದೆ. ನಾವು ಸಶಸ್ತ್ರ ಪಡೆಗಳನ್ನು ಬಲಪಡಿಸುತ್ತಿದ್ದೇವೆ' ಎಂದು ಅವರು ವಿವರಿಸಿದರು.

2014ರಲ್ಲಿ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಎಚ್‌ಎಎಲ್‌ನ ನೂತನ ಹೆಲಿಕಾಪ್ಟರ್ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಕಳೆದ ವರ್ಷ ಉದ್ಘಾಟಿಸಿದ್ದರು.

ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯು ವೋಟ್ ಬ್ಯಾಂಕ್ ರಾಜಕಾರಣದ ಕಾರಣಕ್ಕಾಗಿ ಅಲ್ಪಸಂಖ್ಯಾತರ ಗುಲಾಮನಾಗಿ ಮಾರ್ಪಟ್ಟಿದೆ ಎಂದ ಅವರು, ಅಧಿಕಾರಕ್ಕೆ ಬಂದರೆ ಬಜರಂಗದಳವನ್ನು ನಿಷೇಧಿಸುವ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ತಿರಸ್ಕರಿಸುವ ಬಗ್ಗೆ ಪ್ರಸ್ತಾಪಿಸಿದ್ದಕ್ಕಾಗಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಇಂತಹ ಪಕ್ಷದಿಂದ ಕರ್ನಾಟಕ ಅಭಿವೃದ್ಧಿ ಆಗುವುದಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್‌ನ ಗೇಮ್ ಪ್ಲಾನ್ ಕರ್ನಾಟಕದ ಜನತೆಗೆ ಗೊತ್ತಿದೆ. ಜೆಡಿಎಸ್‌ಗೆ ಮತ ಚಲಾಯಿಸುವುದು ಕಾಂಗ್ರೆಸ್‌ಗೆ ಮತ ನೀಡಿದಂತೆ ಎಂದು ಅವರು ಹೇಳಿದರು.

ಅಧಿಕಾರಕ್ಕೆ ಬಂದರೆ ಎನ್‌ಇಪಿಯನ್ನು ತಿರಸ್ಕರಿಸಲು ಮುಂದಾಗಿರುವ ಕಾಂಗ್ರೆಸ್ ಗ್ರಾಮೀಣ ವಿದ್ಯಾರ್ಥಿಗಳ ಶತ್ರುವಾಗಿದೆ ಎಂದು ಹೇಳಿದರು.

SCROLL FOR NEXT