ರಾಜಕೀಯ

ವಿಧಾನಸಭೆ ಚುನಾವಣೆಯಲ್ಲಿ ಸೋಲು; ಹೊಸ ಸರ್ಕಾರದಲ್ಲಿ ಹುದ್ದೆ ಅಥವಾ ಲೋಕಸಭಾ ಟಿಕೆಟ್, ಜಗದೀಶ್ ಶೆಟ್ಟರ್ ಮುಂದಿನ ನಡೆಯೇನು?

Ramyashree GN

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸಿ ಸೋತಿದ್ದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ಜಗದೀಶ ಶೆಟ್ಟರ್ ಅವರು ಭಾನುವಾರ ಬೆಂಗಳೂರಿಗೆ ತೆರಳಿದ್ದು, ಅವರಿಗೆ ಕಾಂಗ್ರೆಸ್ ಯಾವುದೇ ಹುದ್ದೆ ನೀಡಿದೆಯೇ ಎಂಬ ಊಹಾಪೋಹಕ್ಕೆ ಕಾರಣವಾಗಿದೆ.

ಹೊಸ ಸರ್ಕಾರದಲ್ಲಿ ಶೆಟ್ಟರ್‌ಗೆ ಉನ್ನತ ಹುದ್ದೆ ನೀಡಬಹುದು ಎಂಬ ಗುಸುಗುಸು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದ್ದು, ಒಂದು ವೇಳೆ ಅವರು ಹುದ್ದೆಯನ್ನು ನಿರಾಕರಿಸಿದರೆ, ರಾಜ್ಯದಲ್ಲಿ ಕಾಂಗ್ರೆಸ್‌ ಕಟ್ಟಲು ಶ್ರಮಿಸುವಂತೆ ಮನವಿ ಮಾಡಲಾಗುವುದು ಎನ್ನಲಾಗಿದೆ. ಪ್ರಬಲ ಲಿಂಗಾಯತ ನಾಯಕರಾಗಿರುವ ಶೆಟ್ಟರ್ ಅವರು ಕಳೆದ ತಿಂಗಳಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಶೆಟ್ಟರ್ ಅವರೊಂದಿಗಿನ ತನ್ನ ಬಾಂಧವ್ಯವನ್ನು ಮುಂದುವರಿಸಲು ಪಕ್ಷ ಬಯಸಿದೆ ಎಂದು ಹೇಳಲಾಗಿದೆ.

ಆದರೆ, ಅಂತಹ ಯಾವುದೇ ಸಾಧ್ಯತೆಯನ್ನು ನಿರಾಕರಿಸಿರುವ ಶೆಟ್ಟರ್, ಕಾಂಗ್ರೆಸ್‌ನಿಂದ ಅಂತಹ ಯಾವುದೇ ಪ್ರಸ್ತಾಪವಿಲ್ಲ. 'ಪಕ್ಷದ ಹಿರಿಯ ನಾಯಕನಾಗಿ ಹೊಸ ಸರ್ಕಾರದ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳುವುದು ನನ್ನ ಕರ್ತವ್ಯ. ಆದ್ದರಿಂದ ನಾನು ಬೆಂಗಳೂರಿಗೆ ಬರಲು ನಿರ್ಧರಿಸಿದೆ' ಎಂದು ಅವರು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಸೋಲು-ಗೆಲುವು ಎನ್ನುವುದಕ್ಕಿಂತ ಪಕ್ಷಕ್ಕೆ ಸೇರ್ಪಡೆಯಾಗುವುದು ಮುಖ್ಯ ಎಂದು ಶೆಟ್ಟರ್‌ ಅವರ ಆಪ್ತರು ಸ್ಪಷ್ಟಪಡಿಸಿದ್ದಾರೆ. 'ಒಂದು ವೇಳೆ ಶೆಟ್ಟರ್ ಅವರು ಚುನಾವಣೆಯಲ್ಲಿ ಸೋತರೆ, ಅವರು ಸಕ್ರಿಯ ರಾಜಕೀಯದಲ್ಲಿ ಇರುವುದನ್ನು ಪಕ್ಷ ಖಚಿತಪಡಿಸುತ್ತದೆ ಮತ್ತು ಅವರಿಗೆ ಸೂಕ್ತ ಸ್ಥಾನವನ್ನು ನೀಡಲಾಗುವುದು ಎಂದು ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದಾರೆ' ಎಂದು ಬಲ್ಲ ಮೂಲಗಳು ತಿಳಿಸಿವೆ.

ಬಿಜೆಪಿಯಿಂದ ಟಿಕೆಟ್ ವಂಚಿತರಾದ ಶೆಟ್ಟರ್ ಅವರು ಬಂಡಾಯವೆದ್ದು, ವಿಧಾನಸಭೆ ಚುನಾವಣೆಗೆ ಕೆಲವು ವಾರಗಳ ಮೊದಲು ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್ ಸೇರಿದ್ದೇ ಬಿಜೆಪಿಯ ಮಹೇಶ್ ಟೆಂಗಿನಕಾಯಿ ವಿರುದ್ಧ ಭಾರಿ ಅಂತರದಿಂದ ಸೋಲಲು ಪ್ರಮುಖ ಕಾರಣ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ಆಡಳಿತ ವಿರೋಧಿ ಅಲೆಯಿಂದಾಗಿ ಶೆಟ್ಟರ್ ಅವರು ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರೂ ಸೋಲುತ್ತಿದ್ದರು ಎಂಬ ಮಾತುಗಳು ಕೇಳಿಬಂದಿವೆ. 'ಶೆಟ್ಟರ್ ಅವರು ಇಷ್ಟು ಬೇಗ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವುದಿಲ್ಲ ಎಂದು ನಮಗೆ ಖಚಿತವಾಗಿದೆ. ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಧಾರವಾಡದಿಂದ ತಮ್ಮ ಹಳೆಯ ರಾಜಕೀಯ ಸ್ನೇಹಿತ ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಸ್ಪರ್ಧಿಸಬಹುದು' ಎಂದು ಮೂಲಗಳು ತಿಳಿಸಿವೆ.

SCROLL FOR NEXT