ರಾಜಕೀಯ

ಕರ್ನಾಟಕದಲ್ಲಿ ತಾಲಿಬಾನೀಕರಣ ಆರಂಭವಾಗಿದೆ: ನಳಿನ್ ಕುಮಾರ್ ಕಟೀಲ್

Lingaraj Badiger

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ ನಂತರ ರಾಜ್ಯದಲ್ಲಿ ತಾಲಿಬಾನೀಕರಣ ಆರಂಭವಾಗಿದ್ದು, ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರು ಶಾಂತಿ ಕದಡಲು ಮುಂದಾಗುತ್ತಿದ್ದಾರೆ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಂಗಳವಾರ ಆರೋಪಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ತಮ್ಮ ಮನೆಯ ಹೊರಗೆ ಪಟಾಕಿ ಸಿಡಿಸುವುದನ್ನು ವಿರೋಧಿಸಿದ್ದ ಬಿಜೆಪಿ ಕಾರ್ಯಕರ್ತನ ಮೇಲೆ ದಾಳಿ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಕೃಷ್ಣಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ  ಚಿಕಿತ್ಸೆ ಫಲಕಾರಿಯಾಗದೆ ಕೃಷ್ಣಪ್ಪ ಅವರು ಸಾವನ್ನಪ್ಪಿದ್ದಾರೆ.

ಇಂದು ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಕೃಷ್ಣಪ್ಪ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ದಕ್ಷಿಣ ಕನ್ನಡ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ರಾಜ್ಯದಲ್ಲಿ ತಾಲಿಬಾನೀಕರಣ ಆರಂಭವಾಗಿದೆ. ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗುವವರು ಎದ್ದುನಿಂತು ಶಾಂತಿ ಮತ್ತು ಸೌಹಾರ್ದತೆಯನ್ನು ಹಾಳು ಮಾಡುತ್ತಿದ್ದಾರೆ. ಕಾಂಗ್ರೆಸ್ ಇಂತಹವರಿಗೆ ಆಶ್ರಯ ನೀಡಿ ಪ್ರಚಾರ ಮಾಡಿದ್ದರಿಂದ ಹೀಗಾಗುತ್ತಿದೆ ಎಂದು ಆರೋಪಿಸಿದರು.

ಈ ಘಟನೆಯನ್ನು ಖಂಡಿಸಿದ ಕಟೀಲ್ ಅವರು, ಕರ್ನಾಟಕವನ್ನು ಮಿನಿ ಬಿಹಾರ ಮಾಡುವ ಪ್ರಯತ್ನ ನಡೆದಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ. ಈ ಸರ್ಕಾರ ಮುಂದುವರಿದರೆ ರಾಜ್ಯಕ್ಕೆ ಏನಾಗುತ್ತದೆ ಎಂಬ ಸಂದೇಶವನ್ನು ಇದು ರವಾನಿಸುತ್ತದೆ. ಇದು ಇಲ್ಲಿ ಜಂಗಲ್ ರಾಜ್ ಸ್ಥಾಪನೆಯಾಗುವ ಸಂಕೇತವಾಗಿದೆ ಎಂದು ಕಟೀಲ್ ಆರೋಪಿಸಿದರು.

SCROLL FOR NEXT