ರಾಜಕೀಯ

ಸಿಎಂ ಆಯ್ಕೆ ಮತ್ತಷ್ಟು ಕಗ್ಗಂಟು: ಡಿಕೆಶಿಯಿಂದ ಇಂದು ಸಂಜೆ ಮತ್ತೆ ಖರ್ಗೆ, ರಾಹುಲ್ ಗಾಂಧಿ ಭೇಟಿ

Lingaraj Badiger

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದಿರುವ ಕಾಂಗ್ರೆಸ್ ಗೆ ಮುಂದಿನ ಮುಖ್ಯಮಂತ್ರಿ ಆಯ್ಕೆ ವಿಚಾರ ಮತ್ತಷ್ಟು ಕಗ್ಗಂಟಾಗಿದ್ದು, ಸಿಎಂ ಹುದ್ದೆಗಾಗಿ ಪಟ್ಟು ಹಿಡಿದಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬುಧವಾರ ಸಂಜೆ ಮತ್ತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ.

ಡಿಕೆ ಶಿವಕುಮಾರ್ ಅವರು ಇಂದು ಮಧ್ಯಾಹ್ನ ಮಲ್ಲಿಕಾರ್ಜುನ ಖರ್ಗೆ ಅವರ ಮನೆಗೆ ತೆರಳಿ, ತಮ್ಮನ್ನೇ ಸಿಎಂ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಆದರೆ ಇದಕ್ಕೆ ಖರ್ಗೆ ಅವರು ಒಪ್ಪಿಲ್ಲ. ಹೀಗಾಗಿ ಸಂಜೆ ಮತ್ತೊಮ್ಮೆ ಭೇಟಿ ಮಾಡಲು ಡಿಕೆಶಿ ನಿರ್ಧರಿಸಿದ್ದಾರೆ.

ಖರ್ಗೆ ಭೇಟಿ ಬಳಿಕ ಮಾಧ್ಯಮದವರಿಗೆ ಯಾವುದೇ ಪ್ರತಿಕ್ರಿಯೆ ನೀಡದ ಡಿಕೆ ಶಿವಕುಮಾರ್ ಅವರು ರಾಷ್ಟ್ರ ರಾಜಧಾನಿಯಲ್ಲಿರುವ ತಮ್ಮ ಸಹೋದರ ಮತ್ತು ಪಕ್ಷದ ಸಂಸದ ಡಿ ಕೆ ಸುರೇಶ್ ಅವರ ನಿವಾಸಕ್ಕೆ ತೆರಳಿದ್ದಾರೆ.

ಡಿಕೆ ಶಿವಕುಮಾರ್ ಅವರು ಇಂದು ಸಂಜೆ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

SCROLL FOR NEXT