ರಾಜಕೀಯ

ನಾನು ಸುಧಾಕರ್ ನ್ನು ಸೋಲಿಸಿದ್ದಕ್ಕೆ ಸಿದ್ದರಾಮಯ್ಯ ಹಾಲು ಕುಡಿದಷ್ಟು ಖುಷಿಪಟ್ಟರು, ಉಳಿದ ಕಾಂಗ್ರೆಸ್ ನಾಯಕರೂ ಹರಸಿದರು: ಪ್ರದೀಪ್ ಈಶ್ವರ್

Sumana Upadhyaya

ಚಿಕ್ಕಳ್ಳಾಪುರ:  ತೆಲುಗು ಭಾಷಿಕರ ಪ್ರಭಾವವನ್ನು ಹೊಂದಿರುವ ಗಡಿಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಪ್ರಭಾವಿ ನಾಯಕ ಮಾಜಿ ಸಚಿವ ಡಾ ಕೆ ಸುಧಾಕರ್‌ ಅವರನ್ನು ಸೋಲಿಸಿ ರಾಜ್ಯಾದ್ಯಂತ ಸುದ್ದಿಯಾದವರು ಕಾಂಗ್ರೆಸ್ ನ ಪ್ರದೀಪ್‌ ಈಶ್ವರ್‌ (Pradeep Eshwar). ತಮ್ಮ ಮಾತಿನಿಂದ ಜನಮನ ಸೆಳೆದಿದ್ದಾರೆ.

ಶಾಸಕರಾದ ನಂತರ ಜನಪ್ರಿಯರಾದ ಈ ಪ್ರದೀಪ್ ಈಶ್ವರ್ ಯಾರು, ಅವರ ಹಿನ್ನಲೆಯೇನು ಎಂದು ಜನರು ಗೂಗಲ್ ನಲ್ಲಿ ಹುಡುಕುತ್ತಿದ್ದಾರೆ. ಯೂಟ್ಯೂಬ್ ನಲ್ಲಿ ಅವರ ವಿಡಿಯೊಗಳನ್ನು ನೋಡಿ ಹೊಗಳುತ್ತಿದ್ದಾರೆ. 

ಕಡುಬಡತನದಿಂದ ಮೇಲೆ ಬಂದ ನಾನು ಬಡವರ ಪರ ಕೆಲಸ ಮಾಡುತ್ತೇನೆ, ಜನರು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಂಡು ನನ್ನ ಬಳಿ ಬರಬಾರದು ನಾನೇ ಅವರ ಬಳಿಗೆ ಹೋಗುತ್ತೇನೆ ಎಂದು ಇಂದು ಕ್ಷೇತ್ರದಲ್ಲಿ ಮನೆಮನೆ ರೌಂಡ್ಸ್ ಹಾಕಿದರು. 

 ಮೊದಲಿಗೆ ಮೈಲಪ್ಪನಹಳ್ಳಿ ಗ್ರಾಮದಿಂದ ಮನೆ ಮನೆಗೆ ಭೇಟಿ ಆರಂಭಿಸಿದ್ದು, ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿ, ಸುಧಾಕರ್ ಸೋಲಿಸಿದ್ದಕ್ಕೆ ಸಿದ್ದರಾಮಯ್ಯ ಹಾಲು ಕುಡಿದಷ್ಟು ಖುಷಿಪಟ್ಟರು.

ಡಿ.ಕೆ.ಶಿವಕುಮಾರ್ ನನ್ನನ್ನು ಅಭಿನಂದಿಸಿ ಆಶೀರ್ವಾದ ಮಾಡಿದರು. ಕೆ.ಸಿ.ವೇಣುಗೋಪಾಲ್ ತಬ್ಬಿಕೊಂಡು ಸಂತೋಷ ಹಂಚಿಕೊಂಡರು. ಸುಧಾಕರ್ ವಿರುದ್ಧ ಗೆದ್ದಿದ್ದಕ್ಕೆ ನನ್ನನ್ನು ಸೆಲೆಬ್ರಿಟಿ ರೀತಿ ನೋಡುತ್ತಿದ್ದಾರೆ. ಜನರ ಪ್ರೀತಿ ಅಭಿಮಾನ ವಿಶ್ವಾಸಕ್ಕೆ ಚಿರಋಣಿ. ನಾನು ನಿರಂತರವಾಗಿ ಕ್ಷೇತ್ರದ ಜನರ ಜೊತೆ ಇರಲು ಬಯಸುತ್ತೇನೆ. ಚಿಕ್ಕಬಳ್ಳಾಪುರ ಕ್ಷೇತ್ರದ ಜನರ ಕಷ್ಟ, ಸುಖದಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದರು.

2019ರಲ್ಲಿ ಕಾಂಗ್ರೆಸ್ ತೊರೆದು ಹೊರಬರಲು ಸಿದ್ದರಾಮಯ್ಯ ಕಾರಣ ಎಂಬ ಡಾ ಸುಧಾಕರ್ ಟ್ವೀಟ್ ಗೆ ಪ್ರತಿಕ್ರಿಯಿಸಿದ ಪ್ರದೀಪ್ ಈಶ್ವರ್, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಗ್ಗೆ ಮಾತನಾಡಬೇಡಿ, ಬಾಯಿ ಮುಚ್ಚಿಕೊಂಡು ಇರಿ. ನಮ್ಮ ಪಕ್ಷದ ಆಂತರಿಕ ವಿಚಾರ ನಿಮಗ್ಯಾಕೆ? 3 ವರ್ಷ ಕಡಲೆಬೀಜ ತಿಂತಿದ್ರಾ ಎಂದು ಟಾಂಗ್ ಕೊಟ್ಟಿದ್ದಾರೆ.

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ರಾಜಕೀಯವಾಗಿ ನನ್ನ ತಂದೆ-ತಾಯಿ ಇದ್ದಂತೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಯಾರೇ ಸಿಎಂ ಆದರೂ ನನಗೆ ಸಂತೋಷ. ಅವರಿಬ್ಬರು ಎರಡು ಕಣ್ಣುಗಳಿದ್ದಂತೆ ಎಂದರು.

SCROLL FOR NEXT