ಬೆಂಗಳೂರು: ರಾಜ್ಯದ ಜನತೆಗೆ ಚುನಾವಣಾ ಪೂರ್ವ ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇವೆ. ನಾಳೆ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದೆ. ನಾಳೆಯಿಂದಲೇ ನಮ್ಮ ಗ್ಯಾರಂಟಿಗಳ ಈಡೇರಿಕೆಗೆ ಪ್ರಯತ್ನ ಮಾಡುತ್ತೇವೆ ಎಂದು ದೆಹಲಿಗೆ ತೆರಳುವ ಮುನ್ನ ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸ ಮುಂದೆ ಮಾಧ್ಯಮ ಪ್ರತಿನಿಧಿಗಳಿಗೆ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷನಾಗಿ ನಾಳೆಯ ಪ್ರಮಾಣ ವಚನ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳುತ್ತಿದ್ದೇನೆ. ಎಐಸಿಸಿ ಅಧ್ಯಕ್ಷರು, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯವರು ರಾಜ್ಯದ ಗ್ಯಾರಂಟಿ ಕಾರ್ಯಕ್ರಮದ ಭರವಸೆಗಳ ಆಶ್ವಾಸನೆ ನೀಡಿದ್ದರು. ಅವರು ಸಹ ಇದರ ಭಾಗವಾಗಿರುತ್ತಾರೆ. ಕರ್ನಾಟಕ ಜನತೆ ಬಯಸಿದಂತಹ ಸರ್ಕಾರ, ಆಡಳಿತವನ್ನು ನೀಡುತ್ತೇವೆ ಎಂದರು.
ರಾಜ್ಯದ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ, ಸಚಿವ ಸಂಪುಟದ ಮೊದಲ ಸಭೆಯಲ್ಲಿಯೇ 5 ಗ್ಯಾರಂಟಿಗಳನ್ನು ತರುತ್ತೇವೆ ಎಂದು ಪುನರುಚ್ಛರಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಕಟ್ಟಾಳುವಿನ ಚಾಣಾಕ್ಷ ನಡೆ: 'ಸಂಪದ್ಭರಿತ' ಖಾತೆ ನೀಡಲು ಒಪ್ಪಿದ ಕೈ ಪಡೆ; ಜಮೀರ್ ಸಂಪುಟ ಸೇರಲು ಡಿಕೆಶಿ ತಡೆ!
ಇದಾದ ಬಳಿಕ ಡಿ ಕೆ ಶಿವಕುಮಾರ್ ಅವರು ನಾಳೆ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ನೂತನ ಸಿಎಂ, ಡಿಸಿಎಂ ಮತ್ತು ಸಚಿವರ ಗುಂಪಿನ ಪ್ರಮಾಣ ವಚನ ಕಾರ್ಯಕ್ರಮದ ಸಿದ್ಧತೆ ಪರಿಶೀಲನೆಯನ್ನು ಅಧಿಕಾರಿಗಳ ಜೊತೆ ನಡೆಸಿದರು.
ದೇಶಾದ್ಯಂತ ಹಲವು ನಾಯಕರುಗಳಿಗೆ ಆಹ್ವಾನ ನೀಡಿದ್ದೇವೆ. ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ನಾನು ಕೋರುತ್ತೇನೆ ಎಂದರು.
ನಾಳೆ ಶನಿವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕಂಠೀರವ ಕ್ರೀಡಾಂಗಣ ಸಿದ್ಧವಾಗುತ್ತಿದೆ. ಹೊರಾಂಗಣ ಕ್ರೀಡಾಂಗಣದಲ್ಲಿ ವ್ಯವಸ್ಥೆಗಳು ನಡೆಯುತ್ತಿದ್ದು, 50,000 ಕ್ಕೂ ಹೆಚ್ಚು ಜನರು ಭಾಗವಹಿಸಬಹುದು. ಬೃಹತ್ ಕಾರ್ಯಕ್ರಮಕ್ಕೆ ಅಧಿಕಾರಿಗಳು ಸಕಲ ಸಿದ್ಧತೆ ನಡೆಸುತ್ತಿದ್ದಾರೆ.
ದೆಹಲಿಗೆ ಹೊರಟ ಸಿದ್ದರಾಮಯ್ಯ, ಡಿಕೆಶಿ: ನಂತರ ಹೆಚ್ ಎಎಲ್ ವಿಮಾನ ನಿಲ್ದಾಣ ಮೂಲಕ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.