ರಾಜಕೀಯ

ಅಧಿವೇಶನದ ನಂತರ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುತ್ತೇವೆ: ಬಸವರಾಜ ಬೊಮ್ಮಾಯಿ

Ramyashree GN

ಬೆಂಗಳೂರು: ವಿಧಾನಮಂಡಲದ ಅಧಿವೇಶನ ಮುಗಿದ ಬಳಿಕ ಬಿಜೆಪಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ನಿರೀಕ್ಷೆ ಇದೆ.

ವಿರೋಧ ಪಕ್ಷದ ನಾಯಕ ಮತ್ತು ಉಪನಾಯಕ ಸ್ಥಾನದ ಬಗ್ಗೆ ಪಕ್ಷ ಇನ್ನೂ ನಿರ್ಧಾರ ತೆಗೆದುಕೊಳ್ಳಬೇಕಿದೆ. ನಾವು ಅದನ್ನು ಅಧಿವೇಶನದ ನಂತರ ಮಾಡುತ್ತೇವೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಬಿಜೆಪಿಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವುದು ದೊಡ್ಡ ಸವಾಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದು, ಬಲಿಷ್ಠ ಹಿರಿಯ ಸಚಿವ ಸಂಪುಟದಲ್ಲಿ ಸದನದ ಒಳಗೆ ಮತ್ತು ಹೊರಗೆ ಸರ್ಕಾರವನ್ನು ನಿಭಾಯಿಸುವ ನಾಯಕನ ಅಗತ್ಯವಿದೆ ಎನ್ನಲಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ 66 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಅಧಿಕೃತ ವಿರೋಧ ಪಕ್ಷವಾಗಿದೆ. ಆದರೆ, ಯಾರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಬೇಕು ಎಂಬ ತಲೆನೋವು ಈಗ ಬಿಜೆಪಿಗೆ ಶುರುವಾಗಿದೆ. ಚುನಾವಣಾ ಫಲಿತಾಂಶ ಪ್ರಕಟವಾಗಿ 10 ದಿನ ಕಳೆದರೂ, ಬಿಜೆಪಿ ಯಾವುದೇ ಹೆಸರನ್ನು ಸೂಚಿಸಿಲ್ಲ.

ಈ ಬಾರಿಯ ಚುನಾವಣೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪರ್ಧಿಸದಿರುವುದು, ಸದನದಲ್ಲಿ ವಿಪಕ್ಷಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದ ಜೆ.ಸಿ. ಮಾಧುಸ್ವಾಮಿ ಸೇರಿದಂತೆ ಹಲವು ಘಟಾನುಘಟಿ ನಾಯಕರು ಸೋಲು ಕಂಡಿರುವುದು ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.

ಯಾರನ್ನು ವಿಪಕ್ಷ ನಾಯಕನನ್ನಾಗಿ ಮಾಡಬೇಕು ಎಂಬ ವಿಷಯದಲ್ಲಿ ಬಿಜೆಪಿಗೆ ಸದ್ಯ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಆರ್. ಅಶೋಕ್ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೆಸರುಗಳು ಕೇಳಿಬರುತ್ತಿದೆ. 

SCROLL FOR NEXT