ರಾಜಕೀಯ

ಅದೃಷ್ಟವಿದ್ದರೆ ಸಿಎಂ ಆಗುವ ಆಸೆ ಇದೆ ಎಂದ ಪರಮೇಶ್ವರ್! ಡಿಕೆ ಸುರೇಶ್ ಹೇಳಿದ್ದು ಹೀಗೆ...

Nagaraja AB

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಇನ್ನೂ ಆರು ತಿಂಗಳು ಕಳೆದಿಲ್ಲ. ಆಗಲೇ ಮುಖ್ಯಮಂತ್ರಿ ಬದಲಾವಣೆ, ಆಕಾಂಕ್ಷಿಗಳು ಸುತ್ತ ನಡೆಯುತ್ತಿರುವ ಚರ್ಚೆಯಿಂದ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಜಗ ಜಾಹೀರು ಆಗುತ್ತಿದೆ. ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ ನಂತರ ನಾಯಕತ್ವ ಬದಲಾವಣೆ ಮಾತುಗಳನ್ನು ತಳ್ಳಿಹಾಕಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ತಾವು ಕೂಡಾ ಸಿಎಂ ಹುದ್ದೆ ಅಲಂಕರಿಸುವ ಬಯಕೆಯನ್ನು ಮುಚ್ಚಿಡಲಿಲ್ಲ.

ಸಿದ್ದರಾಮಯ್ಯ ಹೊರತು ಪಡಿಸಿದರೆ, ಪರಮೇಶ್ವರ್ ಅವರೇ ಸಿಎಂ ಆಗಬೇಕು ಅಂತ ಬಯಸುತ್ತೇವೆ ಎಂಬ ಸಹಕಾರ ಸಚಿವ ಕೆಎನ್ ರಾಜಣ್ಣ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಾ. ಜಿ. ಪರಮೇಶ್ವರ್, ನನಗೂ ಸಿಎಂ ಆಗುವ ಆಸೆ ಇದೆ.  ಅದೃಷ್ಟವಿದ್ದರೆ ಮುಂದಿನ ದಿನಗಳಲ್ಲಿ ಅಂತಹ ಅದೃಷ್ಟ ಕೂಡಿಬರಬಹುದು ಎಂದು ನಂಬಿಕೆ ಹೊಂದಿದ್ದೇನೆ. ಅದೃಷ್ಟಕ್ಕೆ ಪೂರಕವಾಗಿ ಕೆಲಸ ಮಾಡುತ್ತೇವೆ. ಅದರಲ್ಲಿ ಯಾವುದೇ ಸಂಶಯವಿಲ್ಲ ಎಂದರು. 

ರಾಜಣ್ಣ ಅವರಿಗೆ  ಆಭಾರಿಯಾಗಿದ್ದೇನೆ ನನಗೂ ಆ ಭಾಗ್ಯ ಸಿಗಲಿ ಎಂಬ ಆಸೆ ಇದೆ. ಆದರೆ. ಆದರೆ, ಯಾವಾಗ ಸಿಎಂ ಸ್ಥಾನ ಸಿಗುತ್ತದೆ ಎಂಬುದು ಗೊತ್ತಿಲ್ಲ. ಪಕ್ಷದಲ್ಲಿ ಸಿಎಂ ಸ್ಥಾನಕ್ಕೆ ಅನೇಕ ಅರ್ಹ ಅಭ್ಯರ್ಥಿಗಳಿದ್ದಾರೆ. ಎಲ್ಲರಿಗೂ ಅವಕಾಶ ಸಿಗಲಿ ಎಂದು ಪರಮೇಶ್ವರ್ ಹೇಳಿದರು.  ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತುಮಕೂರಿನ ಮನೆಗೆ ಭೇಟಿ ನೀಡಿದಾಗ ಈ ವಿಷಯದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಅವರು ನಿರಾಕರಿಸಿದರು.

ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಸಿಬ್ಬಂದಿ ಸಿಎಂ ಬದಲಾವಣೆ ವಿಷಯವನ್ನು ದೆಹಲಿಯಲ್ಲಿ ನಾಲ್ಕು ಜನರು ನಿರ್ಧರಿಸುತ್ತಾರೆ. ಆ ನಾಲ್ಕು ಜನರನ್ನು ಬಿಟ್ಟರೆ ಯಾರೇ ಮಾತಾಡಿದರೂ ಬೆಲೆಯಿಲ್ಲ. ಹೈಕಮಾಂಡ್ ನಾನೇ ಮುಖ್ಯಮಂತ್ರಿ ಎಂದು ಹೇಳಿದರೆ, ಅದಕ್ಕೆ ನಾನು ಹೌದು ಎಂದು ಹೇಳುತ್ತೇನೆ ಎಂದು ಖರ್ಗೆ ಹೇಳಿದರು.

ಮತ್ತೊಂದೆಡೆ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲದಿರುವಾಗ ಊಹಾಪೋಹದ ಪ್ರಶ್ನೆಗಳ ಚರ್ಚೆಯಲ್ಲಿ ಅರ್ಥವಿಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಹೋದರ ಹಾಗೂ ಲೋಕಸಭಾ ಸದಸ್ಯ ಡಿ ಕೆ ಸುರೇಶ್ ಹೇಳಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದು, ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ. ಹುದ್ದೆ ಖಾಲಿ ಇರುವಾಗ ಈ ವಿಷಯವನ್ನು ಚರ್ಚಿಸಬೇಕು.  ಅಂತಹ ಮಾತುಕತೆಯಿಂದ  ಈಗ ಏನು ಪ್ರಯೋಜನ? ಎಂದರು.

ಕರ್ನಾಟಕದ ಜನತೆ ಕಾಂಗ್ರೆಸ್‌ಗೆ ಐದು ವರ್ಷಗಳ ಕಾಲ ರಾಜ್ಯವನ್ನು ಆಳಲು ಅವಕಾಶ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಶಿವಕುಮಾರ್ ಸರ್ಕಾರವನ್ನು ಸುಗಮವಾಗಿ  ನೋಡಿಕೊಳ್ಳುವ ಗುರಿ ಹೊಂದಿದ್ದಾರೆ ಎಂದು ಅವರು ತಿಳಿಸಿದರು. 

SCROLL FOR NEXT