ರಾಜಕೀಯ

ನಾನೇ 5 ವರ್ಷ ಸಿಎಂ ಎಂದು ಹೇಳುವ ಸಂದರ್ಭ ಸೃಷ್ಟಿಯಾಗಿ​ದ್ದು ಅನಾರೋಗ್ಯಕರ ಬೆಳವಣಿಗೆ: ಸಿದ್ದರಾಮಯ್ಯಗೆ ಎಸ್ಎಂಕೆ ಕಿವಿಮಾತು

Shilpa D

ಮಂಡ್ಯ: ಜಾತಿ ಆಧಾರದಲ್ಲಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಜೊತೆಗೆ, ನಾನೇ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಹೇಳುವುದೂ ಅನಾರೋಗ್ಯಕರ ಬೆಳವಣಿಗೆ ಎಂದು ಬಿಜೆಪಿ ಮುಖಂಡ ಎಸ್‌.ಎಂ.ಕೃಷ್ಣ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದಾರೆ.

ಮಂಡ್ಯದಲ್ಲಿ ಪ್ರಸಕ್ತ ರಾಜ್ಯ ರಾಜಕಾರಣದ ಬಗ್ಗೆ ಮಾತಾಡಿದ ಅವರು, ಯಾವುದೇ ಸಂದರ್ಭದಲ್ಲಾದರೂ ನಾಯಕತ್ವ ಸುಲಭವಾದುದಲ್ಲ. ಯೋಗ್ಯತೆ, ಸಾಧನೆ ಮತ್ತು ತಪಸ್ಸುಗಳ ಆಧಾರದದಲ್ಲಿ ನಾಯಕತ್ವದ ತೀರ್ಮಾನ ಆಗಬೇಕು ಎಂದು ಹೇಳಿದರು. ರಾಜಕೀಯ ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ತಿರುವು ಪಡೆದುಕೊಳ್ಳುತ್ತದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ  ಐದು ವರ್ಷಗಳ ತಾವೇ ಮುಖ್ಯಮಂತ್ರಿ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕೃಷ್ಣ, ಅವರು ಹಾಗೆ ಹೇಳುವಂಥ ಸಂದರ್ಭ ಸೃಷ್ಟಿಯಾಗಿದ್ದು ಅನಾರೋಗ್ಯಕರ ಬೆಳವಣಿಗೆ ಎಂದು ಹೇಳಿದರು. ಸಿದ್ದರಾಮಯ್ಯ ಆ ಮಾತು ಹೇಳುವ ಸ್ಥಿತಿ ಉದ್ಭವಿಸಬಾರದಿತ್ತು ಎಂದು ಹಿರಿಯ ನಾಯಕ ಅಭಿಪ್ರಾಯಪಟ್ಟರು.

ವೈಯಕ್ತಿಕ ಸಾಧನೆ, ಯೋಗ್ಯತೆ, ಸಾಮಾಜಿಕ ಕಳಕಳಿ ಇರುವವರು ಮುಖ್ಯಮಂತ್ರಿಯಾಗಬೇಕು. ಜಾತಿ ಆಧಾರದ ಮೇಲೆ ಅವಕಾಶ ಪಡೆಯುವುದು ಪ್ರಜಾಪ್ರಭುತ್ವದ ಅಣಕ. ಪ್ರತಿ ರಾಜಕೀಯ ಕಾಲಘಟ್ಟದಲ್ಲಿ ತಿರುವುಗಳಿರುತ್ತವೆ, ಅದನ್ನು ಆಧರಿಸಿ ಸ್ಥಾನಗಳ ಬದಲಾವಣೆಯಾಗುತ್ತವೆ ಎಂದರು.

ನಾನೇ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಹೇಳುವ ಅನಾರೋಗ್ಯಕರ ಕಾಲಘಟ್ಟಕ್ಕೆ ನಾವಿಂದು ತಲುಪಿದ್ದೇವೆ. ಈಗ ಈ ಪ್ರಶ್ನೆ ಉದ್ಬವಿಸುವ ಅವಶ್ಯಕತೆಯೇ ಇರಲಿಲ್ಲ. ಉನ್ನತ ಸ್ಥಾನದಲ್ಲಿರುವವರು ಇತಿಮಿತಿ ಇಟ್ಟುಕೊಂಡು ಮಾತನಾಡಿದರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ ಎಂದರು.

SCROLL FOR NEXT