ಬೆಂಗಳೂರು: ಕುಟುಂಬ ರಾಜಕಾರಣದ ಬಗ್ಗೆ ಪ್ರಧಾನಿ ಮೋದಿಯವರು ಅವಕಾಶ ಸಿಕ್ಕಾಗಲೆಲ್ಲಾ ಮಾತಾಡುತ್ತಾರೆ. ಆದರೀಗ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಗ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಇದ್ಯಾವ ರಾಜಕಾರಣ ಮೋದಿಯವರೆ? ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರು ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿರುವ ಅವರು, ಕುಟುಂಬ ರಾಜಕಾರಣದ ಬಗ್ಗೆ ಪ್ರಧಾನಿ ಮೋದಿಯವರು ಅವಕಾಶ ಸಿಕ್ಕಾಗಲೆಲ್ಲಾ ಮಾತಾಡುತ್ತಾರೆ. ಮೊನ್ನೆಯಷ್ಟೆ ಮಧ್ಯಪ್ರದೇಶದ ಚುನಾವಣಾ ಪ್ರಚಾರದಲ್ಲಿ ಮೋದಿಯವರು ಕುಟುಂಬ ರಾಜಕಾರಣದ ವಿರುದ್ಧ ಗಂಟಲು ಶೋಷಣೆ ಮಾಡಿಕೊಂಡಿದ್ದರು. ಆದರೀಗ ಮಾಜಿ ಸಿಎಂ ಬಿಎಸ್‌ವೈ ಮಗ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ. ಇದ್ಯಾವ ರಾಜಕಾರಣ ಮೋದಿಯವರೆ? ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದು ಪೋಸ್ಟ್ ನಲ್ಲಿ, ಕುಟುಂಬ ರಾಜಕಾರಣದ ವಿರುದ್ಧ ಮಾತಾಡಲು ಮೋದಿಯವರು ಯಾವ ನೈತಿಕತೆಯನ್ನು ಉಳಿಸಿಕೊಂಡಿಲ್ಲ. ಗಾಜಿನ ಮನೆಯಲ್ಲಿ ಕುಳಿತು ಕಲ್ಲೆಸೆಯುವ ಮುನ್ನ ತಾವೆಲ್ಲಿ ಕುಳಿತಿದ್ದೇವೆ ಎಂಬ ವಾಸ್ತವ ಅರಿಯಬೇಕು. ಬೇರೆಯವರು ಮಾಡಿದರೆ ಅಪರಾಧ, ತಾನು ಮಾಡಿದರೆ ಆದರ್ಶ ಎಂಬ ಭ್ರಮೆ ಒಳ್ಳೆಯದಲ್ಲ ಮೋದಿಯವರೆ ಎಂದು ಹೇಳಿದ್ದಾರೆ.