ಎಚ್. ಡಿ. ಕುಮಾರಸ್ವಾಮಿ 
ರಾಜಕೀಯ

ಸಿಎಂ ಇಬ್ರಾಹಿಂ ಉಚ್ಛಾಟನೆ: ನಂಬಿದವರಿಗೆ ನಾಮ ಬಳಿಯುವ ಕುಮಾರಸ್ವಾಮಿ ಮಂಥರೆ, ಶಕುನಿ ಎಂದ ಕಾಂಗ್ರೆಸ್!

ಕುಮಾರಸ್ವಾಮಿ ಕೈ ಹಿಡಿದವರ ತಲೆ ಕಡಿಯುವ, ಹೆಗಲು ಕೊಟ್ಟವರ ಬೆನ್ನಿಗೆ ಚೂರಿ ಹಾಕುವ, ನಂಬಿದವರಿಗೆ ನಾಮ ಬಳಿಯುವ ರಾಮಾಯಣದ ಮಂಥರೆ, ಮಹಾಭಾರತದ ಶಕುನಿಯೇ ಸರಿ ಎಂದು ಕಾಂಗ್ರೆಸ್ ಟೀಕಾ ಪ್ರಹಾರ ನಡೆಸಿದೆ.

ಬೆಂಗಳೂರು: ಕುಮಾರಸ್ವಾಮಿ ಕೈ ಹಿಡಿದವರ ತಲೆ ಕಡಿಯುವ, ಹೆಗಲು ಕೊಟ್ಟವರ ಬೆನ್ನಿಗೆ ಚೂರಿ ಹಾಕುವ, ನಂಬಿದವರಿಗೆ ನಾಮ ಬಳಿಯುವ ರಾಮಾಯಣದ ಮಂಥರೆ, ಮಹಾಭಾರತದ ಶಕುನಿಯೇ ಸರಿ ಎಂದು ಕಾಂಗ್ರೆಸ್ ಟೀಕಾ ಪ್ರಹಾರ ನಡೆಸಿದೆ.

ಸಿಎಂ ಇಬ್ರಾಹಿಂ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಛಾಟನೆ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್,  ಕ್ಷಣಕ್ಕೊಂದು ಬಣ್ಣ, ದಿನಕ್ಕೊಂದು ವೇಷ ತೊಡುವ ನಿಮ್ಮ ಬಣ್ಣದೋಕುಳಿಯಾಟಕ್ಕೆ ಗೋಸುಂಬೆಯೇ ಲಾಗ ಹೊಡೆದಿದೆ! ಹಿಂದಿನ ನಿಮ್ಮ ಎಲ್ಲ ಅಕ್ರಮ, ಅನಾಚಾರ, ಅವ್ಯವಹಾರಗಳು ಹೊರಬರುತ್ತವೆ ಎಂದು ಹೆದರಿ ಬಿಜೆಪಿ ಸೆರಗಿನೊಳಗೆ ಸೇರಿಕೊಂಡಿರುವ ನಿಮ್ಮ ಜಾತ್ಯತೀತತೆ ನಾಟ್ಯಕ್ಕೆ ಬೆರಗಾಗಿ ತೆನೆ ಹೊತ್ತ ಮಹಿಳೆಯೇ "ಕೋಮು-ಕುಂಡ"ದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಟೀಕಿಸಿದೆ.

ಮೊದಲ ಬಾರಿ ನಿಮ್ಮನ್ನು ಸಿಎಂ ಮಾಡಿದ ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸದೆ ವಚನ ಭ್ರಷ್ಟರಾದಿರಿ, ದ್ರೋಹ ಮಾಡಿದಿರಿ. ಕಾಂಗ್ರೆಸ್ ನಿಮ್ಮನ್ನು ಸಿಎಂ ಮಾಡಿದಾಗ ಯಡಿಯೂರಪ್ಪ ಅಸೆಂಬ್ಲಿಯಲ್ಲಿ ಹೇಳಿದ್ದರು. "ಶಿವಕುಮಾರ್, ಈ ಅಪ್ಪ ಮಕ್ಕಳನ್ನು ನಂಬಬೇಡಿ, ಬಳಸಿ ಬಿಸಾಡುತ್ತಾರೆ. ಹಾವು ಇವರ ಲಾಂಚನ" ಎಂದು. ಆದರೆ ಸಿದ್ದಾಂತಕ್ಕಾಗಿ ಕಾಂಗ್ರೆಸ್ ನಿಮ್ಮ ಜತೆ ನಿಂತಿತ್ತು. ಕಾಂಗ್ರೆಸ್ ದಯಾಭಿಕ್ಷೆಯಿಂದ ಎರಡನೇ ಬಾರಿಗೆ ಸಿಎಂ ಆದ ನಿಮಗೆ ಕಿಂಚಿತ್ತಾದರೂ ನಿಯತ್ತು ಬೇಡವೇ? ಓಹ್.. ಕ್ಷಮಿಸಿ, ಆತ್ಮಸಾಕ್ಷಿ ಮಾರಿಕೊಂಡೇ ರಾಜಕೀಯ ಬಯಲಾಟ ಆಡುವ ನಿಮ್ಮಂತವರಿಂದ ನೀತಿ, ನಿಯತ್ತು, ನೈತಿಕತೆ ನಿರೀಕ್ಷೆ ಮಾಡುವುದೇ ಮಹಾಪಾಪ ಎಂದಿದೆ. 

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಅನ್ಯ ರಾಜ್ಯದ ಪೇಶ್ವೆ ಎಂದು ನಿಂದಿಸಿದಿರಿ. 2.50 ಕೋಟಿಯಂತೆ ಸರಕಾರಿ ಹುದ್ದೆ ಮಾರಿಕೊಂಡ ಭ್ರಷ್ಟ ಎಂದಿರಿ. ಸಿ ಟಿ ರವಿಯನ್ನು ಲೂಟಿ ರವಿ ಎಂದು ನಾಮಕರಣ ಮಾಡಿದವರೂ ನೀವೇ. ಇವತ್ತು ಅವರದ್ದೇ ಅಂಗಿ ಚುಂಗು ಹಿಡಿದು ನಿಂತಿದ್ದೀರಲ್ಲಾ... ನಿಮಗೇನಾದರೂ ಆತ್ಮಗೌರವ ಇದೆಯೇ? ಎಂದು ಪ್ರಶ್ನಿಸಿದೆ.  ಒಕ್ಕಲಿಗರು ನನಗೆ ಮತ ಹಾಕಿಲ್ಲ ಎನ್ನುವ ಮೂಲಕ ಅವರಿಗೆ ದ್ರೋಹ, ಅವಮಾನ ಮಾಡಿರುವ ನಿಮ್ಮನ್ನು ಆ ಭೈರವೇಶ್ವರನೂ ಕ್ಷಮಿಸುವುದಿಲ್ಲ. ಒಕ್ಕಲಿಗರಿಂದ ನೀವು ಬೆಳೆದಿರೇ ಹೊರತು ನಿಮ್ಮಿಂದ ಸಮುದಾಯವೇನೂ ಉದ್ಧಾರ ಆಗಿಲ್ಲ ಎಂದು ಟೀಕಾ ಪ್ರಹಾರ  ಮಾಡಿದೆ. 

ಇನ್ನೊಂದೆಡೆ ಅಲ್ಪಸಂಖ್ಯಾತರ ಅಗತ್ಯವಿಲ್ಲ, ಅವರನ್ನು ನಂಬಿಕೊಂಡು ರಾಜಕಾರಣ ಮಾಡಿಲ್ಲ ಅನ್ನುತ್ತೀರಿ.  ಹಿಂದೆ ನೀವು ಮಕ್ಮಲ್ ಟೋಪಿ ಹಾಕಿದ್ದೇನು? ಬಿರಿಯಾನಿ ತಿಂದಿದ್ದೇನು? ಮಸೀದಿ ಹೊಕ್ಕಿದ್ದೇನು? ಆಹಾ..! ಅದೇನು ನಾಟಕ, ಅದೇನು ಪಂಚರಂಗಿ ಆಟ? ಈಗ, ಅಲ್ಪಸಂಖ್ಯಾತರನ್ನು ನಂಬಿಕೊಂಡು ರಾಜಕಾರಣ ಮಾಡಿಲ್ಲ ಎನ್ನುವ ನಿಮ್ಮ ಬಾಯಲ್ಲಿರುವುದು ನಾಲಿಗೆಯೋ ಅಥವಾ ಕೊಳಕುಮಂಡಲ ಹಾವೋ?! ಐಟಿ, ಇಡಿ ಕಿಂದರ ಜೋಗಿ ಅಮಿತ್ ಶಾ ಕಾಲಿಗೆ ಬಿದ್ದು ರಾಜಕೀಯ ವಿರೋಧಿಗಳಿಗೆ ಗುಂಡಿ ತೋಡುವುದರಲ್ಲಿ ಮಗ್ನರಾಗಿರುವ ಕುಮಾರಣ್ಣ, ನೀವೇ ನಿಮ್ಮ ಪಾಲಿನ ಭಸ್ಮಾಸುರ! ಸ್ವಲ್ಪ ಕಾಲ ತಡೆದು ನೋಡಿ, ನಿಮ್ಮ ಗುಂಡಿಯಲ್ಲಿ ಬಿದ್ದು ನೀವೇ ಹೆಂಗೆ ಒದ್ದಾಡುತ್ತೀರಿ ಅಂತಾ ಎಚ್ಚರಿಕೆ ನೀಡಿದೆ.

ನಿಯತ್ತು ಮತ್ತು ಕುಮಾರಸ್ವಾಮಿ ಎರಡೂ ವಿರುದ್ಧ ಪದಗಳು ಎಂಬುದು ಜಗಜ್ಜಾಹಿರು! ಕುಟುಂಬಕ್ಕೂ, ಪಕ್ಷದ ಸಿದ್ಧಾಂತ,, ಮುಖಂಡರು, ಕಾರ್ಯಕರ್ತರು, ಕೈ ಹಿಡಿದ" ಜನರು, ನಂಬಿದ ಸಮುದಾಯಕ್ಕೂ ನಿಯತ್ತಾಗಿಲ್ಲ.ಕುಲದ ಮಠಕ್ಕೂ ಕೊಡಲಿ ಕಾವಾದಿರಿ. ಕೊನೇ ಪಕ್ಷ ನಿಮ್ಮ ಆತ್ಮಸಾಕ್ಷಿಗಾದರೂ ನಿಯತ್ತಾಗಿದ್ದೀರಾ? ಅದೂ ಇಲ್ಲ. ಹತಾಶೆ ಆತ್ಮಸಾಕ್ಷಿಯನ್ನೇ ಕೊಂದಿದೆ! ಹೀಗಾಗಿ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡುವ ಅಗತ್ಯವಿಲ್ಲ ಎಂದು ಕಾಂಗ್ರೆಸ್  ಲೇವಡಿ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಗೆ ರೂ.10 ಕೋಟಿ: ಸುರಂಗ ರಸ್ತೆ ಯೋಜನೆಯಿಂದ 'ಸಸ್ಯೋದ್ಯಾನ'ದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ- ಡಿಕೆ ಶಿವಕುಮಾರ್

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

SCROLL FOR NEXT