ರಾಜಕೀಯ

ಎರಡೂವರೆ ವರ್ಷದ ನಂತರ ಸಚಿವ ಸಂಪುಟ ಪುನಾರಚನೆ: ಮುಖ್ಯ ಸಚೇತಕ ಅಶೋಕ್ ಪಟ್ಟಣ್

Lingaraj Badiger

ಬೆಂಗಳೂರು: ಎರಡೂವರೆ ವರ್ಷದ ನಂತರ ರಾಜ್ಯ ಸಚಿವ ಸಂಪುಟ ಪುನಾರಚನೆಯಾಗಲಿದೆ. ಆಗ ನನಗೂ ಸಚಿವ ಸ್ಥಾನ ಸಿಗಲಿದೆ ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ ಹಾಗೂ ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಅವರು ಶುಕ್ರವಾರ ಹೊಸ ಬಾಂಬ್ ಸಿಡಿಸಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅಶೋಕ್‌ ಪಟ್ಟಣ್ ಅವರು, ರಾಜ್ಯ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಈ ಕುರಿತು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಎರಡೂವರೆ ವರ್ಷದ ನಂತರ ಸಚಿವ ಸಂಪುಟ ಪುನಾರಚನೆಯಾಗಲಿದೆ. ನಾನೊಬ್ಬ ಹಿರಿಯ ಶಾಸಕ. ನಾನು ಮಂತ್ರಿಯಾಗಬೇಕಿತ್ತು. ಆದರೆ ಈಗ ಎಲ್ಲರಿಗೂ ಮಂತ್ರಿ ಸ್ಥಾನ ನೀಡಲು ಸಾಧ್ಯವಿಲ್ಲ. ಹೀಗಾಗಿ ಎರಡೂವರೆ ವರ್ಷದ ನಂತರ ನಾನೂ ಸಚಿವನಾಗುತ್ತೇನೆ ಎಂದು ಸುರ್ಜೇವಾಲಾ ಅವರು ನನಗೆ ಭರವಸೆ ನೀಡಿದ್ದಾರೆ ಎಂದು ರಾಮದುರ್ಗದ ಕಾಂಗ್ರೆಸ್ ಶಾಸಕ ಹೇಳಿದ್ದಾರೆ.

ಜಾತಿ ಆಧಾರದಲ್ಲಿ ಸಚಿವ ಸ್ಥಾನ ನೀಡಲಾಗಿದೆ. ಎರಡೂವರೆ ವರ್ಷದ ನಂತರ ನನಗೂ ಸಚಿವ ಸ್ಥಾನ ಸಿಗುತ್ತದೆ ಎಂಬ ನಂಬಿಕೆ ಇದೆ ಎಂದು ಶಾಸಕ ಅಶೋಕ್ ಪಟ್ಟಣ್ ವಿಶ್ವಸ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಸಚಿವ ಸ್ಥಾನ ಸಿಗದಿದ್ದರೂ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದ ಪಟ್ಟಣ್, ನಾಲ್ಕರಿಂದ ಐದು ಪೋರ್ಟ್‌ಫೋಲಿಯೋಗಳನ್ನು ಬದಲಾಯಿಸಲಾಗುತ್ತದೆಯೇ ಅಥವಾ ಇಡೀ ಕ್ಯಾಬಿನೆಟ್ ಅನ್ನು ಪುನರ್ರಚಿಸಲಾಗುತ್ತದೆಯೇ ಎಂಬ ಬಗ್ಗೆ ನನಗೆ ನಿಖರವಾದ ಮಾಹಿತಿ ಇಲ್ಲ ಎಂದಿದ್ದಾರೆ.

ಇನ್ನು ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ ಹೈಕಮಾಂಡ್ ನಿರ್ಧರಿಸುತ್ತದೆ. ''ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರು, ಕಿರಿಯರು ಎಂಬ ಭೇದಭಾವ ಇಲ್ಲ ಎಂದು ಅಶೋಕ್ ಪಟ್ಟಣ್ ಅವರು ಹೇಳಿದ್ದಾರೆ.

SCROLL FOR NEXT