ರಾಜಕೀಯ

ಪಂಚ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ರಚನೆ, ಕೇಂದ್ರ ಕರ್ನಾಟಕವನ್ನು ನಿರ್ಲಕ್ಷ್ಯಿಸುತ್ತಿದೆ: ಮಲ್ಲಿಕಾರ್ಜುನ ಖರ್ಗೆ

Ramyashree GN

ಕಲಬುರಗಿ: ಮುಂದಿನ ತಿಂಗಳು ಚುನಾವಣೆ ನಡೆಯಲಿದ್ದು, ಎಲ್ಲಾ ಐದು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವು ಸರ್ಕಾರ ರಚಿಸಲಿದೆ ಮತ್ತು ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಜೋರಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಹೇಳಿದ್ದಾರೆ.

ಕಲಬುರ್ಗಿಯಲ್ಲಿ ಎಎನ್‌ಐ ಜೊತೆ ಮಾತನಾಡಿದ ಖರ್ಗೆ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ತಮ್ಮ ಕೆಲಸವನ್ನು ಸರಿಯಾಗಿ ಮಾಡುತ್ತಿವೆ ಮತ್ತು ಅಲ್ಲಿನ ಜನರು ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿಲ್ಲ ಎಂದರು.

ನವೆಂಬರ್‌ನಲ್ಲಿ ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ಮಿಜೋರಾಂ ಸೇರಿ ಎಲ್ಲಾ ಐದು ರಾಜ್ಯಗಳಲ್ಲಿ ಒಂದು ಮತ್ತು ಎರಡು ಹಂತಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ.

ನವೆಂಬರ್ 7ರಂದು ಮಿಜೋರಾಂ, ನವೆಂಬರ್ 7 ಮತ್ತು ನವೆಂಬರ್ 17ರಂದು ಛತ್ತೀಸ್‌ಗಢ, ನವೆಂಬರ್ 17ರಂದು ಮಧ್ಯಪ್ರದೇಶ, ನವೆಂಬರ್ 25ರಂದು ರಾಜಸ್ಥಾನ ಮತ್ತು ನವೆಂಬರ್ 30ರಂದು ತೆಲಂಗಾಣದಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಎಲ್ಲಾ ರಾಜ್ಯಗಳಲ್ಲಿ ಮತ ಎಣಿಕೆ ನಡೆಯಲಿದೆ.

'ಐದು ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್‌ನ ಸಿದ್ಧತೆಗಳು ಉತ್ತಮವಾಗಿ ನಡೆಯುತ್ತಿವೆ. ನಾವು ಎಲ್ಲಾ ರಾಜ್ಯಗಳಲ್ಲಿ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ಮುಖ್ಯವಾಗಿ ಹಣದುಬ್ಬರ ಮತ್ತು ನಿರುದ್ಯೋಗದಿಂದಾಗಿ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಎದುರಾಗಿದೆ' ಎಂದು ಖರ್ಗೆ ತಿಳಿಸಿದರು.

'ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಜನರು ತಿರುಗಿ ಬೀಳುತ್ತಿದ್ದಾರೆ. ಕೇಂದ್ರದ ಬಿಜೆಪಿ ಚುನಾವಣಾ ಭರವಸೆಗಳನ್ನು ಈಡೇರಿಸಿಲ್ಲ. ನಿರುದ್ಯೋಗವಾಗಲಿ, ರೈತರ ಆದಾಯ ದ್ವಿಗುಣವಾಗಲಿ, ಹೂಡಿಕೆ ಸೇರಿದಂತೆ ಯಾವುದೇ ಭರವಸೆ ನೀಡಿದ್ದರೂ, ಬಿಜೆಪಿ ಒಂದೇ ಒಂದು ಭರವಸೆಯನ್ನು ಈಡೇರಿಸಿಲ್ಲ' ಎಂದು ದೂರಿದರು.

ತವರು ಜಿಲ್ಲೆ ಕಲಬುರ್ಗಿಗೆ ಭೇಟಿ ನೀಡಿರುವ ಖರ್ಗೆ, ಕೇಂದ್ರ ಸರ್ಕಾರ ಕರ್ನಾಟಕವನ್ನು ನಿರ್ಲಕ್ಷ್ಯಿಸುತ್ತಿದೆ. ಕೇಂದ್ರದ ಯಾವುದೇ ಯೋಜನೆಗಳನ್ನು (ಕರ್ನಾಟಕಕ್ಕೆ) ನೀಡುತ್ತಿಲ್ಲ ಎಂದು ಆರೋಪಿಸಿದರು.

ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಮುಖ ಪ್ರತಿಸ್ಪರ್ಧಿಗಳಾಗಿದ್ದು, ತೆಲಂಗಾಣದಲ್ಲಿ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್), ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವ ನಿರೀಕ್ಷೆಯಿದೆ.

ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸದ್ಯ ತಯಾರಿ ನಡೆಸುತ್ತಿದ್ದು, ಪಕ್ಷಗಳ ನಾಯಕರು ರ್ಯಾಲಿಗಳನ್ನು ಉದ್ದೇಶಿಸಿ ಜನರಿಗೆ ಭರವಸೆಗಳನ್ನು ನೀಡುತ್ತಿದ್ದಾರೆ.

SCROLL FOR NEXT