ರಾಜಕೀಯ

ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ, ಶಾಸಕರಲ್ಲ: ಸಿಎಂ ಸಿದ್ದರಾಮಯ್ಯ

Lingaraj Badiger

ಬೆಂಗಳೂರು: ತಮ್ಮ ಸಚಿವ ಸಂಪುಟ ಪುನಾರಚನೆಯ ಸಾಧ್ಯತೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಭಾನುವಾರ ಹೇಳಿದ್ದಾರೆ.

ಇಂದು ನಗರದಲ್ಲಿ ಎರಡೂವರೆ ವರ್ಷದ ನಂತರ ಸಚಿವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಬೇಕು ಎಂಬ ಕೆಲ ಕಾಂಗ್ರೆಸ್ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಎಲ್ಲಾ ಶಾಸಕರು ಹಾಗೆ ಹೇಳಿದ್ದಾರೆಯೇ? ಎಂದು ಪ್ರಶ್ನಿಸಿದರು. ಹಾಗೇನಾದರೂ ಹೇಳಿದ್ದರೆ ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.

"ಸಂಪುಟ ಪುನಾರಚನೆ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆಯೇ ಹೊರತು ಶಾಸಕರಲ್ಲ" ಎಂದು ಸಿಎಂ ಹೇಳಿದ್ದಾರೆ.

ಇದೇ ವೇಳೆ ಜಾತಿ ಗಣತಿ ವರದಿ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಇಡೀ ದೇಶದಲ್ಲಿ ಜಾತಿಗಣತಿ ಮೊದಲು ಮಾಡಿದ್ದು ನಮ್ಮ ಸರ್ಕಾರ. ನಿಖರವಾಗಿ ಪ್ರತಿ ಜಾತಿಗಳ ಆರ್ಥಿಕ, ಸಾಮಾಜಿಕ, ಆರ್ಥಿಕ ಸ್ಥಿತಿ ತಿಳಿಯುವ ಉದ್ದೇಶದಿಂದ ಜಾತಿ ಜನಗಣತಿ ಮಾಡಿಸಿದ್ದೆ. ಇದಕ್ಕಾಗಿ 165 ಕೋಟಿ ರೂ. ಖರ್ಚು ಮಾಡಿದ್ದೆವು ಎಂದರು.

ನನ್ನ ಅವಧಿಯಲ್ಲಿ ನಡೆದ ಜಾತಿ ಸಮೀಕ್ಷೆ ಸಂದರ್ಭದಲ್ಲಿ ಕಾಂತರಾಜು ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದರು. ನಾನು ಇದ್ದಾಗ ಅವರು ವರದಿ ಸಲ್ಲಿಸಲಿಲ್ಲ. ನಾನು ಹೋದ ಮೇಲೆ ಯಡಿಯೂರಪ್ಪ, ಕುಮಾರಸ್ವಾಮಿ, ಬೊಮ್ಮಾಯಿ ಬಂದರೂ ಅವರು ವರದಿ ಬಿಡುಗಡೆ ಮಾಡಿಲ್ಲ. ಕುಮಾರಸ್ವಾಮಿ ಸಮಯದಲ್ಲಿ ವರದಿ ರೆಡಿ ಆಗಿದೆ. ಅಂದಿನ ಸಚಿವ ಪುಟ್ಟರಂಗಶೆಟ್ಟಿ ವರದಿ ತೆಗೆದುಕೊಳ್ಳೋಕೆ ರೆಡಿ ಇದ್ದರು. ಆದರೆ ಕುಮಾರಸ್ವಾಮಿ ವರದಿ ತೆಗೆದುಕೊಳ್ಳಬೇಡ ಎಂದು ಹೆದರಿಸಿದರು. ಅದಕ್ಕೆ ಪುಟ್ಟರಂಗಶೆಟ್ಟಿ ವರದಿ ಪಡೆಯಲಿಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಆರೋಪ ಮಾಡಿದರು. 

SCROLL FOR NEXT