ರಾಜಕೀಯ

ಬಿಜೆಪಿ-ಜೆಡಿಎಸ್ ಮೈತ್ರಿಗೆ ಅಮಿತ್ ಶಾ ಒಪ್ಪಿಗೆ; 4 ಲೋಕಸಭಾ ಕ್ಷೇತ್ರಗಳಲ್ಲಿ 'ತೆನೆ' ಪಕ್ಷ ಸ್ಪರ್ಧೆ: ಬಿ ಎಸ್ ಯಡಿಯೂರಪ್ಪ

Sumana Upadhyaya

ಬೆಂಗಳೂರು: ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಕಾ ಆದಂತಾಗಿದೆ, ಗೃಹ ಸಚಿವ ಅಮಿತ್ ಶಾ ಮೈತ್ರಿಗೆ ಒಪ್ಪಿಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಮುಂದೆ ಈ ವಿಷಯವನ್ನು ಬಹಿರಂಗವಾಗಿ ಒಪ್ಪಿಕೊಂಡಿರುವ ಬಿಎಸ್ ವೈ, ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಮುಂಬರುವ ಲೋಕಸಭೆ ಚುನಾವಣೆಗೆ ಸಹಕಾರಿಯಾಗಲಿದೆ, ಅಮಿತ್ ಶಾ ಅವರು 4 ಸ್ಥಾನಗಳನ್ನು ಜೆಡಿಎಸ್ ಗೆ ಬಿಟ್ಟುಕೊಡಲು ಒಪ್ಪಿಕೊಂಡಿದ್ದಾರೆ. ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡರೆ ಬಿಜೆಪಿ ಪಕ್ಷಕ್ಕೆ ಹೆಚ್ಚು ಶಕ್ತಿ ಬರಲಿದೆ ಎಂದಿದ್ದಾರೆ.

ರಾಜ್ಯದಲ್ಲಿ 4 ಲೋಕಸಭಾ ಸ್ಥಾನಗಳಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಈಗಾಗಲೇ ವರಿಷ್ಠರು ನಮಗೆ ದೆಹಲಿಯಿಂದ ಸೂಚನೆ ನೀಡಿದ್ದಾರೆ. ಉಭಯ ಪಕ್ಷಗಳ ವರಿಷ್ಠರ ಮಧ್ಯೆ ಮಾತುಕತೆ ನಡೆದಿದೆ ಎಂದಿದ್ದಾರೆ. 

ಮೈತ್ರಿ ಬಹಳ ಮುಖ್ಯ: ರಾಜ್ಯದಲ್ಲಿ ಜನ ವಿರೋಧಿ ಕಾಂಗ್ರೆಸ್ ಸರ್ಕಾರ ವಿರುದ್ಧ ಪ್ರಬಲವಾಗಿ ಹೋರಾಡಲು ವಿಪಕ್ಷಗಳ ಮಧ್ಯೆ ಮೈತ್ರಿ ಬಹಳ ಮುಖ್ಯವಾಗಿದೆ. ನಾವು ಒಗ್ಗಟ್ಟಾಗಿ ಸರ್ಕಾರ ವಿರುದ್ಧ ಹೋರಾಡುತ್ತೇವೆ ಎಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. 

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಸ್ಥಾನಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಗೆ ಮುಂದಿನ ಚುನಾವಣೆಯಲ್ಲಿ ಮಾಸ್ಟರ್ ಸ್ಟ್ರೋಕ್ ಕೊಡಲು ನಿರ್ಧರಿಸಿರುವ ಜೆಡಿಎಸ್ ವರಿಷ್ಠ ದೇವೇಗೌಡರು ಈಗಾಗಲೇ ಲೋಕಸಭೆ ಚುನಾವಣೆ ಸಂಬಂಧ ದೆಹಲಿಯಲ್ಲಿ ಬಿಜೆಪಿ ವರಿಷ್ಠ ನಾಯಕರನ್ನು ಭೇಟಿ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. 

ಇತ್ತೀಚೆಗೆ ಪ್ರಜ್ವಲ್ ರೇವಣ್ಣ  ಅವರ ಕೋರ್ಟ್ ಕೇಸ್ ಗೆ ಸಂಬಂಧಿಸಿದಂತೆ ವಕೀಲರ ಭೇಟಿಗೆ ದೆಹಲಿಗೆ ತೆರಳಿದ್ದ ದೇವೇಗೌಡರು ಇದೇ ವೇಳೆ ರಹಸ್ಯವಾಗಿ ಅಮಿತ್ ಶಾ ಜೊತೆ ಚರ್ಚೆ ನಡೆಸಿದ್ದಾರೆ. ಉಭಯ ನಾಯಕರ ನಡುವೆ ಮೈತ್ರಿ ಬಗ್ಗೆ ಅನೌಪಚಾರಿಕವಾಗಿ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.

SCROLL FOR NEXT